Thursday, November 2, 2017

ಕುದಿ ಎಸರು.....ತಿಟ್ಹತ್ತಿ ತಿರುಗಿ ನೋಡಿದಾಗ...

ಮೊನ್ನೆ ಅನಾರೋಗ್ಯದ ಕಾರಣ ಸಿಕ್ಕ ರಜೆಯಲ್ಲಿ ಇಡೀ ದಿನ ರಾತ್ರಿ ಈ ಪುಸ್ತಕ ಓದಿ ಮುಗಿಸಿದೆ. spellbound  ಅಥವಾ  ಮಾತುಮರೆತೆ ಎನ್ನುವುದು ಈ ಪುಸ್ತಕಕ್ಕೆ ನನ್ನ ಮೊದಲ ಸ್ಪಂದನೆ. ಒಂದರ್ಧ ಗಂಟೆ ಸುಧಾರಿಸಿಕೊಂಡು ಮುಂದಿನ ಎರಡು ದಿನಗಳಲ್ಲೆಲ್ಲ ಪುಸ್ತಕದ ಓದು ನೆನಪಾಗುತ್ತಲೇ ಇರುವಾಗ ಮತ್ತೆ ಮತ್ತೆ ಬಂದ ಭಾವ "ಈ ಲೇಖಕಿಗೆ. (ಹುಂ ಪುಸ್ತಕದೊಳಗಿನ ವ್ಯಕ್ತಿಯಾಗಿ ಅಲ್ಲ).. ಕೈ ಮುಗಿಯಬೇಕು. ಗೌರವದಿಂದ ತಲೆಬಾಗಿ ನಂತರ ಗಟ್ಟಿಯಾಗಿ ತಬ್ಬಿಗೊಳ್ಳಬೇಕು" ಎಂಬುದು.
ನಾನೂ ಆಗೀಗ ಕೆಲವು ಸ್ನೇಹಿತರ ಪುಸ್ತಕ-ಸಾಹಿತ್ಯ ಚಟುವಟಿಕೆಗಳಲ್ಲಿ ಕಂಡ ಎತ್ತರದ ನಿಲುವಿನ ವಿಜಯಮ್ಮ ಹಾಗೆ ಮೇಲುಮೇಲಿಂದಲೇ ತುಂಬ ಇಷ್ಟವಾಗಿದ್ದರು. ನನಗೆ ಅವರು ಪತ್ರಕರ್ತೆ ಎಂಬುದರ ಹೊರತಾಗಿ ಅವರ ಇನ್ಯಾವ ವಿವರಗಳೂ ಈ ಪುಸ್ತಕ ಓದುವವರೆಗೆ ಗೊತ್ತಿರಲಿಲ್ಲ. ಆ ಕಾರ್ಯಕ್ರಮಗಳಲ್ಲಿ ಅವರಾಡಿದ ನೇರ ಮೌಲಿಕ ಅನಿಸಿಕೆಗಳು ಮೇಲಕ್ಕೆ ಕಾಣುವ ಅವರ ಚುಂಬಕ ವ್ಯಕ್ತಿತ್ವವನ್ನು ಇನ್ನೂ ಇಷ್ಟವಾಗಿಸಿದ್ದವು. ಅವರ ಮಾತುಕತೆಗಳಲ್ಲಿ ಹಣಿಕಿ ಹಾಕುವ ಹಳೆಯ ಎಷ್ಟೊಂದು ಜನ ಸಾಹಿತಿಗಳ ಬಿಡಿ ಬಿಡಿ ಚಿತ್ರಗಳು ನನಗೆ ಇಷ್ಟವಾಗಿದ್ದವು. ಶ್ರೀನಿವಾಸರಾಜು, ಕಿ.ರಂ, ರಾಜರತ್ನಂ, ಮಾಸ್ತಿ.. ಇವರುಗಳ ಬಗ್ಗೆ ಅವರಾಡುವ ಪಕ್ಕದ ಮನೆಯ ಹುಡುಗಿಯ ಹಾಗಿನ ಸರಳ, ಸಲಿಗೆಯ ಮತ್ತು ಅಕ್ಕರೆಯ ಚಿತ್ರಣಗಳು ನನ್ನ ಓರಗೆಯವರಿಗೆ ಮುಖ್ಯವಾದ ಕೊಂಡಿಗಳು. ಎಲ್ಲ ಮೇರು ಸಾಹಿತಿಗಳನ್ನೂ ಅವರವರ ಭವ್ಯ ಫ್ರೇಮುಗಳಲ್ಲಿ ದೂರದಿಂದ ಕಂಡವರಿಗೆ ಇವರು ಕಡೆದಿಡುವ ದಿಟ್ಟ, ಸ್ಪಷ್ಟ ಆದರೂ ಅಕ್ಕರೆಯ ಚಿತ್ರಣಗಳ ಅವಶ್ಯಕತೆ ತುಂಬ ಇದೆ ಅನಿಸುತ್ತದೆ ನನಗೆ.
ಇಷ್ಟೆಲ್ಲ ಹೇಳಲೇಬೇಕೆನಿಸಿತು ಏಕೆಂದರೆ ಆ ಮಾತುಕತೆಗಳಲ್ಲಿ, ಬರಹಗಳಲ್ಲಿ ಇರುವ ಸ್ಪಷ್ಟತೆ, ದಿಟ್ಟತನ, ಮತ್ತು ತಾನು ಬರೆದ ವಿಚಾರಗಳ ಬಗ್ಗೆ ನಿಷ್ಠುರವಾದ ಅಕ್ಕರೆ ಈ ಪುಸ್ತಕದಲ್ಲಿದೆ. ಹಾಗಂತ ಎಲ್ಲಿಯೂ ಹೊಂದಾಣಿಕೆಯಿಲ್ಲದ ನಿರ್ಲಿಪ್ತ ಪ್ರಸ್ತುತಿಯಲ್ಲಿ ಲೇಖಕಿಯಾಗಿ ಅವರು ಅದ್ಭುತವಾಗಿ ಹೊಮ್ಮಿದ್ದಾರೆ. ನಾನು ಓದಿದ ಕೆಲವು ಅನುವಾದಿತ ಕೃತಿಗಳಲ್ಲಿ ( ಕುಣಿಯೇ ಘುಮಾ - ಮಾಧವಿ ದೇಸಾಯಿ/ಮರಾಠಿ, ನ-ಹನ್ಯತೆ - ಮೈತ್ರೇಯಿ ದೇವಿ/ಬಂಗಾಳಿ..., ಕಮಲಾದಾಸ್-ನನ್ನ ಕಥೆ/ ಮಲಯಾಳಿ, ) ಮತ್ತು ನಮ್ಮದೇ ಪ್ರತಿಭಾ ಬರೆದಿರುವ ಅನುದಿನದ ಅಂತರಗಂಗೆ...ಈ ಮೊದಲಾದ ದಿಟ್ಟ ಕೃತಿಗಳಲ್ಲಿ ನಾನು ನನ್ನನ್ನು, ಜಗತ್ತಿನ ಎಲ್ಲ ಹೆಣ್ಣು ಜೀವಗಳ ಚಡಪಡಿಕೆಯನ್ನು ಅನುಭವಿಸಿದ್ದೆ. ಪ್ರತಿಯೊಂದೂ ಓದು ಸಹಾ ನನ್ನದೇ ಮಿತಿಗಳನ್ನ ಅರ್ಥ ಮಾಡಿಕೊಳ್ಳಲು ತಮ್ಮದೇ ರೀತಿಯಲ್ಲಿ ನೆರವಾಗಿವೆ. ಈ ಪುಸ್ತಕ ಇದೇ ಹಾದಿಯಲ್ಲಿ ಆಳವಾದ ಮತ್ತು ವಿಸ್ತಾರವಾದ ಗುರುತು ನೆಟ್ಟಿದೆ.
ತನ್ನ ಅತ್ಯಂತ ಖಾಸಗೀತನದಲ್ಲಿ ಹೆಣ್ಣು ಅನುಭವಿಸಿದ ಹತಾಶೆ, ಅವಮಾನ, ಕೀಳರಿಮೆ ಮತ್ತು ಅಭಿವ್ಯಕ್ತವಾಗಿಲ್ಲದೆಯೂ ಒಳಗಿಂದಲೇ ಚುಚ್ಚುತ್ತಲೇ ಇರುವ ಪ್ರತಿರೋಧ ಇದನ್ನು ಸಮಸ್ತರ ಎದುರಿಗೆ ಇಡುವುದು ತುಂಬ ಧೈರ್ಯ ಬೇಡುವ ಸವಾಲಿನ ಕೆಲಸ. ಓದುವಾಗ ಭೇಷ್ ಎಂದವರು ಮತ್ತೆ ಎದುರಿಗೆ ಸಿಕ್ಕಾಗ ನೋಡುವ ಬೇರೆಯದೇ ನೋಟವನ್ನು ತಡೆಯುವ ಧೈರ್ಯ ಇದ್ದವರು ಮಾತ್ರ ಬರೆಯುವ ಧೈರ್ಯ ಮಾಡಬಲ್ಲರು ಎನ್ನುವುದು ನನ್ನ ಮಾತು. ಅದನ್ನ ಇಲ್ಲಿ ವಿಜಯಮ್ಮ ಮಾಡಿದ್ದಾರೆ. ಅವರ ಹೆಸರಲ್ಲೇ ಇರುವ ಅಮ್ಮ ಕಿರಿಯರ ಎಲ್ಲ ದಿಗ್ಭ್ರಮೆಗಳನ್ನು ಸಂತೈಸಿದರೆ, ಅವರ ಬದುಕಿನ ಹಲ ಮಗ್ಗುಲುಗಳನ್ನು ಈಗಲೇ ನೋಡಿದ ಅವರ ಓರಗೆಯವರ ಓಹ್..ನೋಟಗಳನ್ನು ನಲ್ಲಿಫೈ ಮಾಡುತ್ತದೆ. ಯಾವ ನೋವನ್ನೂ ವೈಭವೀಕರಿಸ‌ದ, ನವಿರಾಗಿಸದ ಒಂದು ಅನುದ್ವೇಗದ ಬರಹವಿಲ್ಲಿದೆ.
ಓದುವಾಗ ಸಿಟ್ ಹತ್ತುತ್ತದೆ ನನಗೆ ಅಯ್ಯೋ ಯಾಕೆ ಸುಮ್ಮನಿದ್ದಳಿವಳು ಎನಿಸುವ ತುದಿಯಲ್ಲಿ ನಿಲ್ಲಿಸುವ ಭಾಗಗಳಿವೆ. ಇಡೀ ಪುಸ್ತಕ ಓದಿ ಮುಗಿಸಿ ಮತ್ತೊಮ್ಮೆ ಮನಸ್ಸಿನಲ್ಲಿ ಕೆಲ ವಿವರಗಳನ್ನ ಹಾಯಿಸುವಾಗ ಅನಿಸುತ್ತದೆ. ಅವರಿಗೆ ಸಿಕ್ಕ ಭಯಂಕರ ಬಾಲ್ಯ ಅವರ ಜೀವನದ  ಎಲ್ಲ ನಡವಳಿಕೆಗಳಲ್ಲೂ ಚಾಚಿಕೊಂಡಿದೆ ಅಂತ. ಅಯ್ಯೋ ಪಾಪ ಎನ್ನಿಸುವ ಅಮ್ಮನ - ಮೈ ಮೇಲೆ ಎರಗುವ ಅಪ್ಪ ಮುಂದಿನ ಒಂದಷ್ಟು ಬಾಲ್ಯಕಾಲ ಅಮ್ಮನಿಲ್ಲದ ಬಾಲೆಯ ಬೆಚ್ಚನೆ ಆಸರೆಯಾಗಿ ಉಳಿದುಬಿಡುತ್ತಾನೆ. ಬಾಯಿಮುಚ್ಚಿಕೊಂಡು ನಲುಗುವ ಅಮ್ಮ ಬರಿ ಹೂವಿನಭಿಷೇಕ ಮಾಡುತ್ತ ಖುಷಿ ಪಡುವ ಅಮ್ಮ ಆ ಮುಗ್ಧ ಮನದ ಮೇಲೆ ಎಂತಹ ಪ್ರಭಾವ ಬೀರಿರಬಹುದು. ನೋವೋ ನರಕವೋ ಇದೇ ನನ್ನ ಬದುಕು. ಬಿಟ್ಟು ಬಂದರೆ ಹಂಗಿಸುವ ಸಮಾಜ ಎಂದು ನೋವು ನುಂಗಿ ನಿಲ್ಲುವ ಆ ತಾಯಿಯು ಮಾತಿಲ್ಲದೆ ತನ್ನ ಸಬ್-ಮಿಶನ್ ಅನ್ನು ಈ ಬಾಲೆಗೆ ದಾಟಿಸಿದ ರೀತಿ ನನ್ನನ್ನು ಅಲುಗಾಡಿಸಿಬಿಟ್ಟಿದೆ. ಮುಂದೆಂದೂ ಗಂಡನೆಂಬ ಜೀವಿ ತನ್ನ ಮೇಲೆ ಮಾಡುವ ಎಲ್ಲ ಅತ್ಯಾಚಾರಗಳನ್ನು ಮಾತಿಲ್ಲದೆ ನುಂಗುವ ಕೂಗು ಮುಚ್ಚಿಹಿಡಿಯುವ ಇವರ ಕ್ರಿಯೆ ಪ್ರತಿಕ್ರಿಯೆಗಳ ಮೂಲ ನನಗೆ ಇವರ ಬರಪೀಡಿತ ಬಾಲ್ಯದಲ್ಲಿ ಕಾಣುತ್ತದೆ. ಅಂತೂ ಒಂದಿನ ಮಗನ ಪ್ರತಿಕ್ರಿಯೆಯ ಮೂಲಕ ತನ್ನ ಪ್ರತಿರೋಧಕ್ಕೆ ಒಂದು ಕಿಟಕಿ ತೆಗೆದದ್ದನ್ನು ನೋಡಿ ಅದರಾಚೆಗೆ ದಾಪುಗಾಲು ಇಡುತ್ತಾರೆ. ಮುಂದಿನ ದಾಪುಗಾಲುಗಳ ಪಯಣದ ಕಥನಕ್ಕೆ ಕಾಯುತ್ತಿದ್ದೇನೆ.
ನಿಜಕ್ಕೂ ಇವರು ಕೊನೆಗಾದರೂ ಹಾಗೆ ಮಾಡದಿದ್ದರೆ ನನಗೆ ಉಸಿರೇ ಕಟ್ಟುತ್ತಿತ್ತು. ತಾನು ಬಿಗಿಯಾಗಿ ಸುತ್ತಿಟ್ಟ ತನ್ನ ಮಿತಿಯನ್ನ ತಾನೇ ಮೀರುವ ಈ ಭಾಗಕ್ಕೆ ಬಂದ ಮೇಲೆ ಅವರು ಅನುಭವಿಸಿದ ಎಲ್ಲ ನೋವಿನ ಕ್ಷಣಗಳನ್ನು ತಡೆದುಕೊಳ್ಳುವ ಶಕ್ತಿ ನನಗೆ ಬಂತು. ಬಹುಶಃ ಮೊದಲಲ್ಲೆ ಇರುವ ಈ ಸೂಚನೆಯೇ ನನಗೆ ಈ ಪುಸ್ತಕದ ಕುದಿಯನ್ನ ತಡೆದು ಮುಂದೋದಲು ಆಸರೆಯೆಂದರೂ ತಪ್ಪಿಲ್ಲ.
ಇದು ಅವರು ಬರೆದ ಹಾಗೆ ಸಾಗಾ ಆಫ್ ಎ ಡೆಸರ್ಟೆಡ್ ವುಮನ್ ಅಲ್ಲ. ಇದು ಸಾಗಾ ಆಫ್ ಆನ್ ಅಸರ್ಟಿವ್ ವುಮನ..... ಬಗ್ಗಿ ಸಾಕಾಗಿ ಮೇಲೆದ್ದ ದಿಟ್ಟೆಯ ಪಯಣ.

ಈಗಾಗಲೇ ಇದನ್ನು ಓದಿದವರ ಕೆಲವು ಅನಿಸಿಕೆಗಳಲ್ಲಿ ಇಷ್ಟೊಂದು ವಿವರಗಳ ಅವಶ್ಯಕವಿತ್ತೆ/ಸಾಮಾಜಿಕ ಸ್ಥಿತಿಗತಿಗಳ ವಿವರವಿಲ್ಲ/ಕೆಳಸ್ತರದ ಬದುಕಿನ ಪರಿಚಯ ಬರಲಿಲ್ಲ.. ಇತ್ಯಾದಿ ಅನಿಸಿಕೆಗಳನ್ನು ಕೇಳಿದೆ. ನಾನು ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅನಿಸುತ್ತಿರುವುದು ಒಂದು ಪದವನ್ನೂ ಅವರು ಅನವಶ್ಯಕ ಉಪಯೋಗಿಸಿಲ್ಲ ಎಂದು. ದೇಹದೊಳಗೆ ಸರಳು ತೂರಿ ಬೆಂಕಿಯ ಮೇಲೆ ಸುಡುವಾಗ ಎಲ್ಲ ಮಗ್ಗುಲುಗಳೂ ಬೆಂದವೇ ಎಂದು ಖಾತ್ರಿ ಮಾಡುತ್ತಾನೆ ಬಾಣಸಿಗ. ಆ ಬೆಂದ ಜೀವ ಹೀಗ್ ಹೀಗೆ ಮಾಡಿಬಿಟ್ಟರಲ್ಲಾ ಅಂತ ವಿವರಿಸುವಾಗ ಬರೀ ನನ್ನ ಸುಟ್ಟು ತಿಂದರು ಅಂತ ಬರೆದರೆ ಅದರ ಸುಡು ಉರಿ ಓದುವವರದ್ದಾಗುವುದು ಹೇಗೆ. ಒಂದು ಕಥೆ, ಕಾದಂಬರಿ, ಅಂಕಣ, ವರದಿ ಬರೆಯುವಾಗ ಅವಶ್ಯಕ ವಿವರಗಳು ಎಂದು ಗಂಡೊಬ್ಬ ಡೀಟೈಲಾಗಿ ಖಾಸಗಿ ವಿವರಗಳನ್ನು ಬರೆದರೆ ಅದು ಬೋಲ್ಡ್ ಬರವಣಿಗೆಯಾಗುವುದಾದರೆ, ವಿಜಯಮ್ಮ ಬರೆದ ಪುಸ್ತಕದಲ್ಲಿನ ಹುರಿಯುವಿಕೆಯ ವಿವರವಿಲ್ಲದೆ ಇದ್ದರೆ ಅದರ ಉರಿ ನಮಗೆ ತಾಗುವುದೇ ಇಲ್ಲ. ಅದು ಮತ್ತೊಂದು ದಿಟ್ಟ ಹೆಣ್ಣಿನ ಸಾಧನ ಕಥೆಯಾಗುತ್ತದೆ ಅಷ್ಟೆ.

ಮದುವೆಯೆಂದಾದ ಮೇಲೆ ಇವರು ಅನುಭವಿಸಿದ ಭಯಂಕರ ಸಂಗತಿಗಳ ಮುಂದೆ ಹುಟ್ಟಿನಿಂದ ಇವರು ಹೆಣ್ಣಾಗಿ ಅನುಭವಿಸಿದ ಸಂಕಟಗಳ ಸರಮಾಲೆ ಮಂಕಾಗಿ ನಮ್ಮ ಗಮನ ಬೇರೆಡೆ ಹೋಗಿಬಿಡುತ್ತದೆ. ತೆವಲು ತೀರಿಸಿಕೊಂಡು ಹೆಣ್ಣು ಹೆತ್ತೆಯಲ್ಲಾ ಎಂದು ಹೆಣ್ಣನ್ನು ಇನ್ನೊಬ್ಬ ಹೆಣ್ಣು ಅತ್ತೆಯೇ ಬೈದಾಡುವ ಅವಳನ್ನು ಜೀವನದ ಸಹಜ ನೆಮ್ಮದಿಗಳಿಂದ ದೂರವಿಡುವ ಪರಿಸ್ಥಿತಿ ಇವತ್ತಿಗೂ ಏನೂ ಬದಲಾಗಿಲ್ಲ. ಇದು ವಿಜಯಮ್ಮನ ಬಾಲ್ಯಕಾಲದಿಂದ ಇವತ್ತಿನವರೆಗೂ ಹಾಗೇ ಇದೆ. ಸುತ್ತಲ ಮನೆಗಳವರು, ಗಂಡು ಮಕ್ಕಳು ಜೊತೆ ಹೆಣ್ಮಕ್ಕಳನ್ನು ತುಚ್ಛೀಕರಿಸುವ ದಿನಗಳೂ ಹಾಗೇ ಇವೆ. ವಿದ್ಯಾವಂತ ಮಧ್ಯಮ ಮತ್ತು ಮೇಲ್ಮಧ್ಯಮವರ್ಗದಲ್ಲಿ ಆಯ್ಕೆರಹಿತ ಒಪ್ಪಿಗೆ ಹೊಂದಾಣಿಕೆ ಇದ್ದರೂ ಹೆಣ್ಣು ಮಕ್ಕಳು ಮುಸುಕಿನೊಳಗೆ ಅನುಭವಿಸುವ ಗುದ್ದು ಅವರಿಗಷ್ಟೇ ಗೊತ್ತು. ಶ್ರಮಿಕ ವರ್ಗ ಮತ್ತು ಕೆಳವರ್ಗದ ಸ್ಥಿತಿ ಇಂದಿಗೂ ಹಾಗೇ ಇದೆ.
ರಾತ್ರಿ ಶೌಚಾಲಯವಿಲ್ಲದೆ ಹೊರಗೆ ಬಂದ ಮಗುವನ್ನ ಪಕ್ಕದ ಮನೆಯವನೇ ಹೆಂಡತಿ ಊರಿಗೆ ಹೋದಳಲ್ಲಾ..ಇವಳೇ ಇರಲಿ ಅಂತ ಅನುಭವಿಸಿ ಗುರುತು ಹೇಳಿದರೆ ಅಂತ ಕಲ್ಲೆತ್ತಿ ಹಾಕುತ್ತಲೇ ಇದ್ದಾನೆ.
ಒಬ್ಬಳೇ ಹೆಂಗಸು ಕತ್ತಲಾದ ಮೇಲೆ ಆಟೋ ಹತ್ತಿದರೂ ಕೈಯ ಮಗುವನ್ನೂ ಹೊರಗೆಸೆದು ಸಿಕ್ಕಿದ್ದೇ ಸಾಕು ಎಂದು ತಮ್ ತಮ್ಮ ಪುರುಷತ್ವವನ್ನು ಇಳಿಸಿ ಹಗುರಾಗುವ ಗಂಡಸರು ನಮ್ಮ ನಡುವೆಯೇ ಆಟೋ, ಬಸ್ಸು, ಕಾರು, ವ್ಯಾನು ಸಾರ್ವಜನಿಕ ಸಾರಿಗೆಯಲ್ಲೆ ಓಡಾಡುತ್ತಿದ್ದಾರೆ.
ಡಿಜಿಟಲ್ ಇಂಡಿಯಾದ ಯುವ ಸಮಾಜ ಸರಿಯಾದ ಓದು ಕೆಲಸವಿಲ್ಲದೆ ಮೊಬೈಲಲ್ಲಿ ಒನ್ ಡೇ ಪ್ಯಾಕುಗಳಲ್ಲೇ ಇಳಿಸಲು ಬರುವ ವಿಡಿಯೋ ನೋಡಿ ಹುಚ್ಚೆದ್ದು ಕೈಗೆ ಸಿಕ್ಕವರ ಮಗು, ಅಜ್ಜಿ, ಹುಡುಗಿ, ಹೆಂಗಸು ಎಂದು ನೋಡದೆ ಮೇಲೆಲ್ಲ ಹಾಯ್ದುಕೊಂಡು, ಕಣ್ಣಿಗೆ ಸಿಕ್ಕಿದ್ದರಲ್ಲೆಲ್ಲ ಅವರನ್ನ ತಿವಿದು ತಮ್ ತಮ್ಮ ಜೀವನದ ಸಾರ್ಥಕ್ಯ ಮೆರೆಯುತ್ತಿದ್ದಾರೆ.
ನಾವು ಹುಡುಗಿಯರು ತಲೆಬಗ್ಗಿಸಿ, ಸೆರಗು ಸಿಕ್ಕಿಸಿ, ಮೇಲುದ ಹೊದ್ದು....ಊರೆಲ್ಲ ಓಡಾಡುತ್ತೇವೆ. ಕೆಲವರು ಎದೆಯುಬ್ಬಿಸಿ ಕಣ್ಣಲ್ಲಿ ಕಣ್ಣು ನೆಡುತ್ತಾರೆ. ಕೈ ಮುಷ್ಟಿಯಾಗುತ್ತದೆ. ಆದರೂ ನಮ್ಮ ಹುಡುಗರು ನಮ್ಮನ್ನು ನೋಡುವ ದೃಷ್ಟಿ ಬದಲಾಗದೆ ಈ ಎರಡೂ ಉಪಯೋಗವಿಲ್ಲವೇ ಅಂತ ನಾನು ಬೇಯುತ್ತೇನೆ. ನನ್ನ ಮಗ ಎಲ್ಲರಲ್ಲೂ ಮನುಷ್ಯರನ್ನೇ ಕಾಣಲಿ..ವಸ್ತುವನ್ನಲ್ಲ ಅಂತ ಕಣ್ತುಂಬಿ ಬೇಡಿಕೊಳ್ಳುತ್ತೇನೆ.

1 comment:

sunaath said...

ಸಿಂಧು, ಈ ಪುಸ್ತಕದ ಪರಿಚಯವನ್ನು ಪತ್ರಿಕೆಯಲ್ಲಿ ಓದಿದಾಗಿನಿಂದ ಇದನ್ನು ಹುಡುಕುತ್ತಿದ್ದೇನೆ. ಇನ್ನೂ ಸಿಕ್ಕಿಲ್ಲ. ನಿಮ್ಮ ಬರಹವನ್ನು ಓದಿದ ಮೇಲೆ, ನನ್ನ ಹಂಬಲ ಇನ್ನಿಷ್ಟು ಜಾಸ್ತಿಯಾಗಿದೆ. ಈ ಪುಸ್ತಕದ ಪ್ರಕಾಶಕರ ವಿಳಾಸವನ್ನು ಕೊಡಲು ಸಾಧ್ಯವೆ? ಅವರಿಂದಲೇ ತರಸಲು ಸಾಧ್ಯವಾದೀತು.

ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ, ಬಿ.ಜಯಶ್ರೀಯವರ ಆತ್ಮಕಥೆ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಸಹ ಒಂದು ಉತ್ತಮ ಕೃತಿಯಾಗಿದೆ. ನೀವು ಓದಿರದಿದ್ದರೆ, ಕಳುಹಿಸಿಕೊಡುವೆ.