Wednesday, December 13, 2017

ಕವಿತೆ ಬರೆಯುವಾ

ಮೊಗ್ಗಾಗುವಾ
ಹೂವಾಗುವಾ
ಜೇನಾಗುವಾ
ಬಗ್ಗೆ ಎಲ್ಲ ಒಂದು ಕವಿತೆ ಬರೆಯುವಾ

ನವೋದಯ ಅಲ್ಲ ಮಾರ್ರೆ
ನವ್ಯೋತ್ತರವೇ ಮುಗಿಯುತ್ತ ಬಂದಿದೆ
ಕಾಲವಲ್ಲದ ಕಾಲದಲಿ
ಹೂಗಿಡಗಳೆಲ್ಲ ಅಂಗಳದಿಂದ
ಇನ್ ಡೋರಾದ ಸಮಯದಲಿ

ಉದ್ಯಾನನಗರಿಯಲಿ ಉದ್ಯೋಗಪರ್ವದಲಿ
ಯಕ್ಷಪ್ರಶ್ನೆಯ ಗಾಣದಲಿ ನೊರೆನೊರೆಯಾದ ಕಬ್ಬಿನ ಹಾಲು
ಕೂಪನ್ ಇಟ್ಟರೆ ಮನೆಬಾಗಿಲಿನಲಿ ಕೊಟ್ಟೆಯಲಿ ತುಂಬಿ ತುಳುಕದ ಹಸುವಿನ ಹಾಲು
ಪೇಪರು,ತಂಗಳು, ಹಾರ್ಮೋನ್ ಹಿಂಡಿಯ ಮೆದ್ದು ನಡೆದಾಡಲಾಗದ ಆಕಳು 

ಅನ್ನುತ್ತದೆ ಈಗಲೂ ಅಂಬಾ
ಗೊಬ್ಬರಕೂ ಆಗದ ಸಗಣಿ ರಸ್ತೆ ತುಂಬಾ
-ಇದ್ದರೂ
ಮಳೆಮುಗಿದ ಬೆಳಗಲಿ, ಚುಮುಗುಡುವ ಚಳಿನಸುಕಲಿ, ಬೇಸಗೆಯ ಎಳೆಬಿಸಿಲಲಿ
ಹೂಚೆಲ್ಲಿದ ಪಾದಪಥ
-ದ ಮೇಲೇ ಎರಡು ಗಾಲಿಯ ನಗರರಥ
ರುಮ್ಮೆನ್ನುತ್ತದೆ


ಲಾಂಗ್ ವೀಕೆಂಡಿನ ಜಂಗುಳಿಯೋಟದಲಿ
ರೆಸಾರ್ಟಿನ ಹಿತ್ತಲಲಿ ಬಣ್ ಬಣ್ಣವಾಗಿ ಅರಳಿದ ದಾಸವಾಳದಲಿ
ಗೈಡನು ಕೈದೋರುವ ಬೆಟ್ಟದಂಚಲಿ ಅರಳಿದ ಕುರಿಂಜಿಯಲಿ
ಕೊಳದ ಅಂಚಿನ ಬಿದಿರುಮೆಳೆಯಲಿ ತೂಗುಬಿದ್ದಿಹ ನಿಜ ಗೀಜಗನ ಗೂಡಲಿ

ಸಂಜೆ ಅಚಾನಕ್ಕಾಗಿ ಸುರಿದು ನಿಂತ ಮಳೆನೆಂದ ಬೀದಿಯಂಚಿನ ಮರಮರದೆದೆಯಲಿ
ಅಲ್ಲಲ್ಲಿ ಇಲ್ಲಿಲ್ಲಿ ಉಳಿದಿರಬಹುದು ಒಂದೊಂದು ಕುಕಿಲು
ಟೆರೇಸು ಬಾಲ್ಕನಿಯ ಕೈದೋಟದಿ ಅರಳು ಹೂಗಳ ನೆರಳಲಿ
ಬೆಕ್ಕು ಕಬಳಿಸದೆ ಉಳಿದ ಪಿಕಳಾರ ಮೈನಾದ ಗೂಡುಗಳಲಿ
ಟೀವಿಗೆ ಕಣ್ಣು ನೆಟ್ಟ ಮಗು ಬಾಗಿಲೆಡೆ ಕಣ್ಣು ಹಾಯಿಸಿ ಅರಳುವ -
ಅಮ್ಮ ಮನೆಗೆ ಮರಳುವ ಕ್ಷಣದಲಿ...
ನಾವು ಕವಿತೆ ಬರೆಯುವಾ
ಮೊಗ್ಗಾಗುವಾ
ಹೂವಾಗುವಾ
ಜೇನಾಗುವಾ
ಕ್ಷಣಗಳ ಬಗ್ಗೆ


ವನದಿಂದ ಉಪವನಕ್ಕೆ,
ಅಂಗಳದಿಂದ ಪುಸ್ತಕಕ್ಕೆ,
ಕಾನಿನಿಂದ ಹೋರಾಟದಂಗಳಕ್ಕೆ
ಬದಲಾದ ಪರಿಸರದಲ್ಲಿ
ನಾವು ಕವಿತೆ ಬರೆಯುವಾ


ಯಾರೂ ಪ್ರಕಟಿಸುವುದಿಲ್ಲ
ಸಾಪ್ತಾಹಿಕಗಳ ತುಂಬ ದೂರದೇಶದ ಹೂವಿನ ಕೊಲ್ಲಿ
ನದಿಯ ಹರಿವು, ಸುಖಬದುಕಿಗೆ ಟಿಪ್ಸು,
ನವಜೀವನದ ಜಾಹೀರಾತು
ಒಂದರ್ಧ ಬಂಡಾಯ, ಇನ್ನೊಂದರ್ಧ ಸ್ತ್ರೀ ಸಂ ವೇದನೆ
ಹಳೆ ಹಳೆಯ ಸಿದ್ಧಾಂತಗಳ ಮರು ಪರಿಶೋಧನೆ
ಅದು ಹೇಗೋ ಮಧ್ಯಕ್ಕೆ ಸಿಕ್ಕಿಬಿದ್ದ ಮಕ್ಕಳ ಪುಟದಲಿ
ಕತೆ,ಚಿತ್ರಕತೆ,ಚಿತ್ತಾರ ಮತ್ತು ಛಾಯಾಚಿತ್ರ ನೆರಳಲಿ
ಕಿರಿ(ಕಿರಿ)ಕಥೆಯಾದ್ರೆ ಹಾಕಿದ್ರೂ ಹಾಕಿಯಾರೆ
ಕವಿತೆಗೆ ಜಾಗವಿಲ್ಲ

ಆದರೂ ನಾವು ಕವಿತೆ ಬರೆಯುವಾ
ಹೀಗೆಲ್ಲ ಬರೆಯದೆ
ಈಗಿತ್ಲಾಗೆ
ಮೊಗ್ಗಾದ
ಹೂವಾದ
ಜೇನಾದ
ಮತ್ತು ದುಂಬಿ ಗುಂಗುಂ ಎಂದ ವಿಷಯ
ಬೇಕಾದವರಿಗೆ ಗೊತ್ತಾಗುವುದು ಹೇಗೆ?
ನಾವು ಕವಿತೆ ಬರೆಯುವಾ
ನ್ಯೂಸ್ ಬ್ರೇಕಿನ ಸುಂಟರಗಾಳಿಯಲಿ
ಒಮ್ಮೊಮ್ಮೆ ಹೂಗಂಧ ಹಕ್ಕಿ ಕುಕಿಲು ಹಾಯಲಿ
ಬ್ಲಾಗ್ದಾಣದಲಿ
ದೊಡ್ಡ ಬೂರುಗದ ಮರ
ಮುತ್ತುಗದ ಹೂವು
ಹಬ್ಬಿದ ಕಾಡುಮಲ್ಲಿಗೆಯ ಬಳ್ಳಿ
ಬಿರಿವ ಹೊಂಗೆಹೂವ ಗೊಂಚಲಲಿ ದುಂಬಿದಂಡು
ಎಲ್ಲಿಂದಲೋ ತಂದ ಕಾಳು ಮರಿಗಳಿಗೂಡುವ ಹಕ್ಕಿವಿಂಡು
ಕಣ್ಮುಚ್ಚಿದರೆ ತಂಗಾಳಿ
ಕ್ರೌಂಚದ ಜೋಡಿಗಳಿಗೆ
ಹೂಡುವ ಮೊದಲೆ ಬಾಣ... ಬೇಡ
ಎನ್ನುವ ಋಷಿಗಣ
ಇಲ್ಲಿ ಬರೆಯುವವರಿಗೂ ಓದುವವರಿಗೂ
ಬರೀ ಖುಷಿ ಕಣಾ...
ನಾವು ಕವಿತೆ ಬರೆಯುವಾ.

Thursday, December 7, 2017

ಎಂ.ಕೆ.ಇಂದಿರಾ ಮತ್ತು ವಾಣಿ

ಅಷ್ಟ ದಿಗ್ಗಜರು ಎಂಬ ಪುಸ್ತಕವನ್ನು ಭಾಗವತರು ಪ್ರತಿಷ್ಠಾನ ನವೆಂಬರ್ ೨೦೧೭ರಲ್ಲಿ ಪ್ರಕಟಿಸಿದರು. ಈ ಪುಸ್ತಕವು ಈ ವರ್ಷಕ್ಕೆ ನೂರು ತುಂಬಿದ ನಮ್ಮ ಎಂಟು ಹಿರಿಯ ಸಾಹಿತಿ, ಕಲಾವಿದರ ಕುರಿತಾಗಿ ರಚಿಸಲ್ಪಟ್ಟಿದೆ. ಇದರ ಸಂಪಾದಕರು ಎನ್.ಎಸ್.ಶ್ರೀಧರಮೂರ್ತಿ.
ಈ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರೇವಣ್ಣ ಅವರು ಮಾತಿನಂತೆ ಈ ದಿಗ್ಗಜರ ಸಾಹಿತ್ಯ, ಪರಿಚಾರಿಕೆ, ಸಾಂಸ್ಕೃತಿಕ ಚಟುವಟಿಕೆಗಳ ಕುರಿತಾದ ಪರಿಚಯಾತ್ಮಕ ವಿಶ್ಲೇಷಣೆಯನ್ನು ಈ ಪುಸ್ತಕ ಒಳಗೊಂಡಿದೆ. ಎಂ.ಗೋಪಾಲಕೃಷ್ಣ ಅಡಿಗ, ಟಿ.ಸುನಂದಮ್ಮ, ಎಂ.ಕೆ.ಇಂದಿರಾ, ವಾಣಿ, ದೇಜಗೌ, ಜಿ.ವಿ.ಅಯ್ಯರ್, ಬಿ.ಎಸ್.ರಂಗಾ, ಬಿ.ಚಂದ್ರಶೇಖರ್ ಇವರುಗಳ ಕುರಿತಾದ ಲೇಖನಮಾಲಿಕೆಗಳಿವೆ. ಈ ಪುಸ್ತಕದಲ್ಲಿ ವಾಣಿಯವರ ಸಾಹಿತ್ಯಲೋಕಕ್ಕೆ ನನ್ನ ಲೇಖನಗಳನ್ನು ಬರೆದಿದ್ದೇನೆ. ಗೆಳತಿ ಮಾಲಿನಿ ಎಂ.ಕೆ.ಇಂದಿರಾ ಅವರ ಕಾದಂಬರೀ ಲೋಕಕ್ಕೆ ಒಂದು ಒಳನೋಟದ ಲೇಖನ ಬರೆದಿದ್ದಾರೆ.
ವಾಣಿ ಮತ್ತು ಇಂದಿರಾ ಇಬ್ಬರ ಕುರಿತಾಗಿಯೂ ಈ ಪುಸ್ತಕ ಬಿಡುಗಡೆಯ ದಿನ ನಾನು ನನ್ನ ಸೀಮಿತ ಓದಿನ ಪರಿಧಿಯಲ್ಲಿ ಈ ಪುಸ್ತಕದಲ್ಲಿರುವ ಇಬ್ಬರು ದಿಗ್ಗಜರಾದ ಎಂ.ಕೆ.ಇಂದಿರಾ ಮತ್ತು ವಾಣಿಯವರ ಕಥೆಗಾರಿಕೆ ಮತ್ತು ಕೃತಿಗಳ ಬಗ್ಗೆ ಮಾತನಾಡಿದೆ. ಅದರ ಸಾರಾಂಶವನ್ನು ಇಲ್ಲಿ ಕೊಡುತ್ತಿದ್ದೇನೆ.
ಮೊದಲಿಗೆ ಎ.ಕೆ.ರಾಮಾನುಜಮ್ ಅವರು ಬರೆದ ಒಂದು ಪುಟ್ಟ ಪದ್ಯವನ್ನು ನೋಡೋಣ.

      ಕಣ್ಣೆದುರಿಗೆ ಪ್ರತ್ಯಕ್ಷ
      ವಾದದ್ದನ್ನ
     ನೋಡು
     ವುದಕ್ಕೆ ಎರಡು ಕಣ್ಣು
     ಸಾಲದು ಸ್ವಾಮೀ
     ಅದೃಷ್ಟ
     ಬೇಕು.

              -(ಎ.ಕೆ.ಆರ್)
ಅವರು ಯಾವ ಸಂದರ್ಭದಲ್ಲಿ ಈ ಕವಿತೆ ಬರೆದರು ಎಂಬ ವಿಶೇಷಮಾಹಿತಿ ನನಗೆ ಗೊತ್ತಿಲ್ಲ. ಆದರೆ ನಮ್ಮ ಎಂ.ಕೆ. ಇಂದಿರಾ ಮತ್ತು ವಾಣಿ ಅಥವಾ ಸುಬ್ಬಮ್ಮನವರು ಈ ಅದೃಷ್ಟವನ್ನು ಯಥೇಚ್ಛ ಪಡೆದಿದ್ದರು ಎಂಬುದನ್ನು ಅವರ ಯಾವ ಪುಸ್ತಕವನ್ನೇ ಓದಿದವರೂ ಒಪ್ಪಲೇ ಬೇಕು. ಇಬ್ಬರ ಕೃತಿಗಳಲ್ಲೂ ನಮ್ಮ ಸುತ್ತಲ ಪರಿಸರ, ನಡವಳಿಕೆ, ನಡೆ ನುಡಿ, ಆಚಾರ ವಿಚಾರ ಮತ್ತು ಸಮುದಾಯದಿಂದಲೇ ಕಟ್ಟಿದ ಹಲವಾರು ಕಥೆಗಳು ಪಡಿಮೂಡಿವೆ. ಅವರ ಕಥೆ ಕಟ್ಟೋಣದ ಅಂದ ಚಂದಕ್ಕೆ ಹೋಲಿಕೆಗಳ ಅವಶ್ಯಕತೆಯೇ ಇಲ್ಲ. ನಮಗನ್ನಿಸಿದ್ದನ್ನು ಥಟ್ ಅಂತ ಚಿತ್ರಸಮೇತ ಬರೆದು ಮುಖಪುಸ್ತಕಕ್ಕೆ ವಾಟ್ಸಪ್ಪಿಗೆ ಹಾಕುವ ನೆಟ್ ಯುಗ ಇದು. ನಮ್ಮ ಅನಿಸಿಕೆಗಳಲ್ಲಿ ಅಭಿವ್ಯಕ್ತಿಗಳಲ್ಲಿ ಮಿತಿಗಳನ್ನು ಗುರುತಿಸಿ ಮೀರುವ ಪ್ರಕ್ರಿಯೆ ಆರಂಭವಾಗಿ ದಶಕಗಳೇ ಕಳೆದಿವೆ. ಆದರೆ ೫೦ ವರ್ಷಗಳ ಹಿಂದೆ ಕಾಲ ಹೀಗಿರಲಿಲ್ಲ. ಬರೆಯುವ ಹೆಂಗಸು ಎಂಬುದೇ ಅಪರೂಪವಾಗಿದ್ದ ಕನ್ನಡ ಸಾಹಿತ್ಯ ಸಮುದಾಯದಲ್ಲಿ ನಾಲ್ಕೆಂಟು ಜನ ಪ್ರಭಾವಶಾಲಿ ಬರಹಗಾರ್ತಿಯರು ಆಗಿಬಂದದ್ದು ನಮ್ಮ ನೆಲದ ಸತ್ವವನ್ನು, ನಮಗಿದ್ದ ಸಾಕಷ್ಟು ಮಿತಿಗಳ ನಡುವೆಯೂ ಅದುಮಿಡದೆ ಪುಟಿದ ಪ್ರತಿಭಾಸ್ರೋತವನ್ನು ತೋರಿಸುತ್ತದೆ. ಮತ್ತು ಇದು ವಿಶಿಷ್ಟ ಕೂಡ. ಅವರಲ್ಲಿ ವಾಣಿ, ಇಂದಿರಾ, ತ್ರಿವೇಣಿಯರು ಮೂರು ಘನಸತ್ವಗಳಾಗಿ ಕನ್ನಡದ ಓದುಪ್ರೀತಿಯ ಮನಗಳನ್ನ ಗೆದ್ದರು. ಮೂವರೂ ವಿಭಿನ್ನ ನಿರೂಪಣೆಗಳಲ್ಲಿ ತಮ್ಮ ಸುತ್ತಲಿನ ಘಟನೆಗಳನ್ನು ಕಥೆಯಾಗಿಸಿ ಮನಮುಟ್ಟುವ ಹಾಗೆ ಬರೆದರು.
ವಾಣಿ ಸಣ್ಣಗೆ ಹರಿವ ಹೊಳೆಗುಂಟ ಇರುವ ಹಾದಿ ಬದಿಯಲಿ ಸಾಗಿದ ಪಥಿಕನ ಪಯಣವಾದರೆ
ಇಂದಿರಾ ಮಲೆನಾಡಿನ ಗುಡ್ಡಕಣಿವೆಯಲಿ ಭೋರ್ಗರೆದು ಸುರಿವ ಪಾತಗಳ ಅಬ್ಬಿಗಳ ಚಾರಣದ ಪಯಣ
ತ್ರಿವೇಣಿ ಬಿಸಿನೀರಿನ ಬುಗ್ಗೆಗಳ ಬಾವಿಗಳ ಅಚ್ಚರಿಗಳ ಮೊಗೆಮೊಗೆದು ಕೊಟ್ಟ ಮಾನಸ ಪಯಣ
ಹೀಗೆ ಈ ಮೂವರೂ ನಮ್ಮ ಕನ್ನಡದ ವಿಶಾಲ ಸಮುದಾಯಗಳಲ್ಲಿ ಇರುವ ಹೆಣ್ಣಿನ ಮನೋಲೋಕವನ್ನು ತಮತಮಗೆ ಹಿಡಿಸಿದ ವಿಧಾನಗಳಲ್ಲಿ ಸಮರ್ಥವಾಗಿ ಮೂಡಿಸಿದ್ದಾರೆ. ವಿಚಾರಗಳನ್ನು ಹೇಳುವ ಒಣಹಾದಿಯನ್ನು ಹಿಡಿಯದ ಈ ಮೂವರೂ ತಮ್ಮ ಸೃಜನಾತ್ಮಕ ಪ್ರತಿಭೆಯನ್ನು ಚೆನ್ನಾಗಿ ಬಳಸಿ ಪುಸ್ತಕ ಹಿಡಿದವರು ಕೆಳಗಿಡದ ಹಾಗೆ ಓದಿಸುತ್ತ... ಹೌದಲ್ಲವೆ, ಹೀಗಲ್ಲವೆ, ಏಕೆ ಹೀಗೆ ಎಂಬ ವಿಚಾರದ ಕಲ್ಲುಗಳನ್ನು ಓದಿದವರ ಮನಃಪಟಲದಲ್ಲಿ ಮೂಡಿಸಿದವರು.
ಈಗ ಮೊದಲು ವಾಣಿಯವರ ಲೇಖಲೋಕದಲ್ಲೊಂದು ಇಣುಕು ಹಾಕುವಾ.
೧೯೧೨ರಲ್ಲಿ ಶ್ರೀರಂಗಪಟ್ಟಣದಲ್ಲಿ ಸಿರಿವಂತ ವಕೀಲರಾದ ನರಸಿಂಗರಾಯರ ಮಗಳಾಗಿ ಹುಟ್ಟಿದ ಸುಬ್ಬಮ್ಮ ಎಂಬ ಪುಟ್ಟ ಹುಡುಗಿ ಮುಂದೆ ಸ್ಪಷ್ಟ ನಿಲುವಿನ ಕಥೆಗಾರ್ತಿ ವಾಣಿಯಾಗಿ ರೂಪುಗೊಂಡರು.
೧೯೮೮ರಲ್ಲಿ ವಾಣಿಯವರ ದೇಹಾಂತ್ಯವಾಯಿತು. ಅವರು ಕಡೆದಿಟ್ಟ ಈ ಕಥಾಶಿಲ್ಪಗಳಿಂದ ಶತಮಾನಗಳ ನಂತರವೂ ಓದಿದವರ ಮನದಲ್ಲಿ ಇಂದಿಗೂ ಜೀವಂತವಾಗಿರುವರು. ಕನ್ನಡದ ಸಾಹಿತ್ಯಲೋಕದಲ್ಲಿ ಓದುಗರ ಮಾನಸದಲ್ಲಿ ಇವರು ಆತ್ಮೀಯವಾಗಿ ನೆಲೆನಿಂತ ಲೇಖಕಿ.
ಮೊದಲು ಲೇಖಕಿಯಾಗಿ ಅವರ ವಿಶಿಷ್ಟತೆಯ ಬಗ್ಗೆ ನೋಡೋಣ. ಅವರ ಬರವಣಿಗೆಯ ಕಾಲ ೫೦ರ ದಶಕದ ಕೊನೆಯಿಂದ ೮೦ರ ದಶಕದ ಮೊದಲಾರ್ಧದವರೆಗೂ. ಇದು ಭಾರತೀಯ ಜನಜೀವನದಲ್ಲಿಯೂ ಸ್ಥಿತ್ಯಂತರದ ಕಾಲವೇ. ಸಣ್ಣಕಥೆಗಳಿಂದ ಮೊದಲ್ಗೊಂಡು ಕಾದಂಬರಿಗಳನ್ನು ಅವರು ಬರೆದರು. ಆ ಕಾಲದಲ್ಲಿ ಪತ್ರಿಕೆಗೆ ಅವರು ಬರೆದ ಕೆಲವು ಲಲಿತ ಪ್ರಬಂಧಗಳು ಹರಟೆ ಎಂಬುದಾಗಿ ಪ್ರಕಟವಾಗಿದೆ. ವಚನಗಳನ್ನೂ ಇವರು ಬರೆದಿರುವರಾದರೂ ನನಗೆ ಇದು ಓದಲು ಸಿಗಲಿಲ್ಲ. ಇಷ್ಟು ವಿಶಾಲ ಸಮಯಾವಕಾಶದಲ್ಲಿ ಅವರು ಸುತ್ತಲಿನ ಸಮಾಜ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದನ್ನು ತಮ್ಮ ಸುಲಲಿತ ಮತ್ತು ಓದಲೇಬೇಕಿನ್ನಿಸುವ ನಿರೂಪಣೆಯಲ್ಲಿ ಸಮರ್ಥವಾಗಿ ಓದುಗರಿಗೆ ದಾಟಿಸಿದ್ದಾರೆ. ನಾನು ಕೇಳ್ಪಟ್ಟ ಹಾಗೆ ಇವರ ಪುಸ್ತಕಗಳು ಆ ಕಾಲದ ಜನಪ್ರಿಯ ಪ್ರಕಟಣೆಯಾಗಿದ್ದವು. ಮೂರು ನಾಲ್ಕು ಚಲನಚಿತ್ರಗಳು ಇವರ ಕಾದಂಬರಿಯನ್ನು ಆಧರಿಸಿ ತಯಾರಾಗಿ ನೋಡುಗರಿಗೂ ಮನಮೆಚ್ಚಾದವು.
ಇದು ಯಾವುದೇ ಒಬ್ಬ ತಕ್ಕ ಮಟ್ಟಿಗಿನ ಲೇಖಕಿಯ ಜನಪ್ರಿಯತೆ ಮತ್ತು ಸಾಧನೆ ಎನ್ನಬಹುದೇನೋ. ವಾಣಿಯವರು ಇದನ್ನು ಒಂದು ಸ್ತರ ಮೇಲಕ್ಕೆ ಕೊಂಡು ಹೋಗುತ್ತಾರೆ. ಅದನ್ನು ನಾನು ಹೀಗೆ ಗುರುತಿಸುತ್ತೇನೆ.
  • ಅವರ ಕಥೆಗಳಲ್ಲಿ ನಮ್ಮ ಸುತ್ತಲಿನ ಸಮಾಜದ ಚಿತ್ರಣವೇ ಇದ್ದರೂ, ಆಗಿನ ನಡವಳಿಕೆ ರೂಢಿಗಳೇ ಕಥೆಯಲ್ಲಿ ಬಂದರೂ... ಹೊಸತಕ್ಕೆ ತುಡಿಯುವ ಮನಸ್ಸು, ವಿಚಾರಶೀಲತೆ, ಮತ್ತು ಅಂತಃಕರಣಗಳು ಇವರ ಕಥೆಗಳ ಜೀವಾಳ. ರಮ್ಯ ಮಾಯಾವಾಸ್ತವದ ಕಥಾನಕಗಳಲ್ಲ ಇವು. ಬದಲಾಗಿ ಮಹಿಳೆಯರ, ಕುಟುಂಬದ ಒಳತೋಟಿಗಳು ಈ ಕಥೆಗಳಲ್ಲಿವೆ. ಅಸಹಾಯ ಸ್ಥಿತಿಯ ಚಿತ್ರಣ ಕೊಡುತ್ತಲೇ ಅದರಿಂದ ಹೊರಬರುವ ದಾರಿಯ ಬಾಗಿಲುಗಳ ಕಡೆಗೆ ಕೈಮರ ಇಟ್ಟಿದಾರೆ. ಕೆಟ್ಟ ನಡವಳಿಕೆಯ ವ್ಯಕ್ತಿಯೊಬ್ಬನು ಅಥವಾ ಒಬ್ಬಳು ಏಕೆ ಹಾಗಿರಬಹುದು ಎಂಬ ಸೂಕ್ಷ್ಮ ಚಿತ್ರಣಗಳಿಲ್ಲಿವೆ. ಯಾರನ್ನೂ ವೈಭವೀಕರಿಸದ ನೈಜ ಪಾತ್ರಚಿತ್ರಣಗಳು ಇವರ ಕಾದಂಬರಿಗಳ ಮತ್ತು ಕಥೆಗಳ ಸತ್ವ. ಒಳಿತು-ಕೆಡುಕುಗಳ ನಡುವಿನ ತೆಳು ಗೆರೆಯನ್ನು ಸೂಚ್ಯವಾಗಿ ಕಾಣಿಸುವ ಈ ಕಥನಗಳಲ್ಲಿ ಓದುಗರ ಭಾವಕ್ಕೆ ಅದನ್ನು ಬಿಡುವ ತೆರೆದ ಭಾವವಿದೆ. ಒಳ್ಳೆಯ ಸ್ವಭಾವದವರಿಗೆ ಮತ್ತು ಧರ್ಮಭೀರುಗಳಿಗೆ ಒಳ್ಳೆಯದೇ ಆಗುವುದು, ಕೆಡುಕಾಗಿ ನಡೆದುಕೊಳ್ಳುವವರು ಮಣ್ಣು ಮುಕ್ಕುವರು ಎಂಬ ಕಪ್ಪು-ಬಿಳುಪು ಸ್ಟೀರಿಯೋಟೈಪ್ ಇವರ ನಿರೂಪಣೆಯಲ್ಲಿಲ್ಲ. ಮೃದು ಮನಸ್ಸಿನವರ ಬದುಕಿನ ಗತಿ, ಎದುರು ಬೀಳಲಾಗದ ಅಸಹಾಯತೆ, ಕಷ್ಟವನ್ನು ಸಹಿಸುವ ಗಟ್ಟಿತನ ... ಇವು ಪದೇ ಪದೇ ಬೇರೆ ಬೇರೆ ರೀತಿಗಳಲ್ಲಿ ನಿರೂಪಿಸಲ್ಪಟ್ಟಿವೆ. ಹಾಗೆಯೇ ಧಾಡಸೀ ಮನೋವೃತ್ತಿಯವರ ಏಳುಬೀಳಿನ ಹಾದಿ, ಉತ್ಸಾಹ, ಮುನ್ನುಗ್ಗುವಿಕೆ, ವಿವೇಚನಾರಾಹಿತ್ಯದಿಂದ ಎದುರಿಸಬೇಕಾದ ವಿರುದ್ಧ ಪರಿಸ್ಥಿತಿ...ಇವೂ ಸಹ. ಹಾಗಂತ ಈ ಸ್ವಭಾವಗಳು ಒಬ್ಬರಲ್ಲಿಯೇ ನೆಲೆಸಿ ದೇವತೆ-ರಾಕ್ಷಸ ಪಾತ್ರ ಸೃಷ್ಟಿಯಿಲ್ಲ. ಎಲ್ಲರಿಗೂ ಇದ್ದಿರಬಹುದಾದ ಮಿತಿ ಮತ್ತು ಸಾಮರ್ಥ್ಯಗಳ ಹದವಾದ ಮಿಶ್ರಣದ ಸಮಾಧಾನ ನಿರೂಪಣೆಯಲ್ಲಿ ಇವು ಮನಗೆಲ್ಲುತ್ತವೆ.
  • ತನ್ನ ಪಾತ್ರವಿದು ಎಂದು ಅರಿವಿದ್ದು ಹರಿಯುವ ತುಂಬು ಹೊಳೆಗೂ ಬೇರೆ ಬೇರೆ ಜಾಗದಲ್ಲಿ ಆಳ ಮತ್ತು ಸುಳಿಗಳಿರುತ್ತವೆ. ಅದರ ಹರಿವನ್ನು ನೆನಪಿಸುವ ಕಾದಂಬರಿಗಳು ವಾಣಿಯವರದು ಎನಿಸಿತು ನನಗೆ ಈ ಪುಸ್ತಕಗಳನ್ನೋದಿ. ಇವತ್ತಿನ ನಮ್ಮ ಮನಸ್ಥಿತಿಗೆ ಇವರ ಕಥೆಗಳ ಸಾವಧಾನದಲ್ಲಿ ಒಂದು ಚಿಕಿತ್ಸೆಯಿದೆ ಅನ್ನಿಸಿತು. ಇದು ಬಹುಶಃ ಆಗಿನ ಕಾಲದ ಎಲ್ಲ ವಿಚಾರಶೀಲ ಬರಹಗಳಲ್ಲಿ ನಾವು ನೋಡಬಹುದೇ ಆದರೂ ಇವರ ಕಥೆಗಳಲ್ಲಿರುವ ಒಳನೋಟ ಹಿತವಾಗಿ ನಿಮ್ಮ ಮನಸ್ಸನ್ನು ಮುಟ್ಟುತ್ತದೆ. ಅರಳಿಸುತ್ತದೆ. ಹೂವೊಂದನ್ನು ಅದರ ತೊಟ್ಟು, ಎಲೆ, ಹೊತ್ತ ಗೆಲ್ಲಿ, ಪೂರ್ಣ ಗಿಡ/ಪೊದೆ/ಮರ ಮತ್ತು ಅದು ನಿಂತ ಆವರಣದ ಸಮೇತ ನೋಡುವ ಆಲ್ ಇನ್-ಕ್ಲೂಸಿವ್ ಚಿತ್ರಣ ಮತ್ತು ಹೂವಿನ ಆಸ್ವಾದನೆಯನ್ನು ನೋಟ, ಪರಿಮಳದಲ್ಲಿಯೇ ಮಾಡಿಸುತ್ತ ಸ್ಪರ್ಶದ ಅನುಭವವನ್ನೇ ಕಟ್ಟಿಕೊಡುವ ಅಪರೂಪದ ಹೂ-ವಿಧಾನ ಈ ಕಥೆಗಾರ್ತಿಯದ್ದು.
  • ನಮ್ಮ ಇಂದಿನ ನಾಗಾಲೋಟದ ಬದುಕಿನಲ್ಲಿ ಸಂಪೂರ್ಣವಾಗಿ ಪುರಾತನವಾಗಿರುವ ಸಾವಧಾನ ಈ ಕಥೆಗಳ ತಿರುಳು. ಆ ಪಲ್ಸ್ ಅನ್ನು ಒಂದು ಸಲ ಅನುಭವಿಸಲು, ಆ ಕಥೆಗಳಲ್ಲಿ ಚಿತ್ರಿತವಾಗಿರುವ ಕಾಲದೊಳಗೆ ಹೊಗಲು ವಾಣಿಯವರ ಕಾದಂಬರಿಯ ಓದು ಅವಶ್ಯವಿದೆ. ಹಳೆಯದಕ್ಕೆ ಮರಳುವ ಮಾತಲ್ಲ ಇದು. ಹಳತಿನ ಪರಿಚಯ, ಆ ಹರಿವಿನ ಅನುಭವ ಇವತ್ತು ನಾವು ಬಿದ್ದಿರುವ ಈಜಿಗೆ ಹೊಸ ಕಸುವನ್ನು ತುಂಬಬಲ್ಲದು ಎನ್ನುವುದು ನನ್ನಭಿಪ್ರಾಯ.
ಎಂ.ಕೆ.ಇಂದಿರಾ
ವಾಣಿಯವರಿಗೆ ಹೋಲಿಸಿದರೆ, ಎಂ.ಕೆ.ಇಂದಿರಾ ಅವರ ಹೆಸರು ಈಗಿನ ಜನರಿಗೆ ಹೆಚ್ಚು ಪರಿಚಿತವೇ. ಇವರ ಬಗ್ಗೆ ಆಗೀಗ ಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಒಂದೊಂದು ಪುಟ್ಟ ಲೇಖನಗಳು ಬರುತ್ತಿರುತ್ತವೆ. ಇತ್ತೀಚಿನ ಓದುಗರ ವಲಯದಲ್ಲಿ ಅವರ ಒಂದಾದರೂ ಕಾದಂಬರಿಗಳನ್ನು ಓದಿದವರು ಇರುತ್ತಾರೆ. ಸಿನಿಮಾಗಳಾದ ಅವರ ಫಣಿಯಮ್ಮ ಮತ್ತು ಗೆಜ್ಜೆ ಪೂಜೆ ಕೃತಿಗಳು ಸಾಕಷ್ಟು ಜನಕ್ಕೆ ಓದದೆಯು ಗೊತ್ತಿವೆ. ಈ ನಿಟ್ಟಿನಲ್ಲಿ ನೋಡಿದರೆ ಇಂದಿರಾ ನಾನು ಆಗಲೆ ಹೇಳಿದ ಹಾಗೆ ಮಲೆನಾಡಿನ ಗುಡ್ಡ ಕಣಿವೆಗಳಲ್ಲಿ ಅಡಗಿ ಕುಳಿತ ಭೋರ್ಗರೆವ ಜಲಪಾತಗಳನ್ನು ಪರಿಚಯಿಸುವ ಚಾರಣದ ಹಾದಿಯನ್ನು ಕಥೆಗಾರಿಕೆಗೆ ತೋರಿದ್ದಾರೆ.
ಇವರ ಕಥೆಗಾರಿಕೆಯ ಬಗ್ಗೆ ಸೂಕ್ಷ್ಮವಾಗಿ ಆದರೂ ದೃಢವಾಗಿ ದಾಖಲಿಸಿರುವ ಕ್ರಾಂತಿಕಾರಕ ವಿಚಾರಗಳ ಬಗ್ಗೆ ನನ್ನ ಸ್ನೇಹಿತೆ ಮಾಲಿನಿ ಉದಾಹರಣ ಸಹಿತವಾಗಿ ಒಳ್ಳೆಯ ಪರಿಚಯ ಮಾಡಿದ್ದಾರೆ. ಅಸಾಮಾನ್ಯ ಸಾಧ್ವಿಯನ್ನಾಗಿ ತೋರಿದ ಒಬ್ಬ ಬಾಲವಿಧವೆಯ ಕಥೆಯ ಮೂಲಕ ಫಣಿಯಮ್ಮದಲ್ಲಿ ಅವರು ಚರ್ಚಿಸಿರುವ ವಿಚಾರಗಳನ್ನು ಇವತ್ತು ಯಾರಾದರೂ ಬರೆದಿದ್ದರೆ ಬ್ಯಾನಾಗಿಬಿಡುತ್ತಿತ್ತು. ಇಂದಿರಾ ಅವತ್ತಿನ ಓದುಗರ ಮಾರ್ಕೆಟ್ಟನ್ನು ಕದಡಲಿಲ್ಲ. ಆದರೆ ಓದಿದವರೆಲ್ಲರ ಮನದಲ್ಲಿ ಹಳೆಯ ಶತಶತಮಾನಗಳ ಕಮಟು ವಿಚಾರದ ಹಳಸಲು ವಾಸನೆ ಮತ್ತು ಅವುಗಳ ದುರುಪಯೋಗಗಳ ಬಗ್ಗೆ ಹಸಿಗೋಡೆಯಲ್ಲಿ ಹರಳು ನಾಟಿದಂತೆ ಬರೆದರು. ಫಣಿಯಮ್ಮ ಈ ಕಥೆಯ ಕ್ರಾಂತಿಕಾರಿಯಲ್ಲ. ಬದಲಾಗಿ ಹಳೆಯ ರಿವಾಜನ್ನ ಕಮಕ್ಕಿಮ್ಮಕ್ಕನ್ನದೆ ಒಪ್ಪಿ ಅದರೊಳಗೇ ಮಿಳಿತವಾದವಳು. ಆದರೆ ತನ್ನ ದೆಸೆ ಇನ್ನೊಬ್ಬರಿಗೆ ಒದಗುವಾಗ ಮಿಡಿಯುವಳು. ಅವಳ ರೂಢಿಗತ ಜೀವನಶೈಲಿ ಅವಳಿಗೆ ಸಂಪ್ರದಾಯವನ್ನು ಪ್ರಶ್ನಿಸುವ ಧೈರ್ಯವನ್ನು ಅವಳ ಪ್ರಶ್ನೆಗಳನ್ನು ಸುತ್ತಲಿನವರು ಹೌದಲ್ಲ ಎಂದು ಒಪ್ಪಬಹುದಾದ ಸನ್ನಿವೇಶಗಳಿಗೆ ಎಡೆಮಾಡುತ್ತದೆ ಅದೇ ಫಣಿಯಮ್ಮ ಕ್ರಾಂತಿಕಾರಕ ವಿಧವೆಯಾಗಿ ಎಲ್ಲರ ವಿರುದ್ಧ ಕತ್ತಿ ಮಸೆದಿದ್ದರೆ ಫ್ಲಾಪ್ ಆಗಿಬಿಡುತ್ತಿದ್ದಳು. ಈ ಸೂಕ್ಷ್ಮ ಬ್ಯಾಲನ್ಸನ್ನು ಇಂದಿರಾ ಅವರ ಕಥನಶಕ್ತಿ ಸೃಜನಶೀಲತೆ ಮತ್ತು ಯಾವುದನ್ನು ಯಾವ ದಾರಿಯಲ್ಲಿ ಹೊಗಿಸಬೇಕು ಎಂಬ ಬುದ್ಧಿವಂತಿಕೆ ಮಾಡಿದೆ. ಫಣಿಯಮ್ಮ ಕೃತಿಯ ಸಾರ್ಥಕತೆ ಅದನ್ನು ಓದಿದವರ ಬದಲಾದ ಮನೋಭಾವದಲ್ಲಡಗಿದೆ. ಅವರ ಕಥೆಗಾರಿಕೆಯ ಬಗ್ಗೆ ಪುಸ್ತಕದಲ್ಲಿ ಸ್ವಲ್ಪ ವಿವರವಾಗಿಯೇ ಬರೆಯಲಾಗಿದೆ. ಓದಿರಿ.
ವಾಣಿ ಮೆತ್ತನೆ ದನಿಪೂರ್ಣ ವಿಚಾರಗಳನ್ನು ನಮ್ಮ ಸುತ್ತಲೆ ಇರುವ ಸಾಧಾರಣ ಸಂಗತಿಗಳಲ್ಲಿಯೇ ಅಡಗಿರುವ ವಿಷಯಗಳ ಮೂಲಕ ಕಥನಕ್ಕೆ ತಂದರೆ, ಓದಿದವರು ಆಹ್..ಹೀಗೂ ಇರಬಹುದೆ ಎಂಬಂಥ ಕಂಡು ಕೇಳಿರದಂಥ ವಿಷಯಗಳನ್ನ ಇಂದಿರಾ ಕಥನಕ್ಕೆ ತಂದರು. ಇಬ್ಬರೂ ಉಪಯೋಗಿಸುವ ಭಾಷಾವಿಧಾನವೇ ಬೇರೆ. ನವಿರು ಮೆಲುಮಾತುಗಳು ವಾಣಿಯದಾದರೆ, ಚುಟುಕು,ಕುಟುಕು ಮತ್ತು ನಗೆಚಾಟಿಕೆಯ ಮಾತುಗಳು ಇಂದಿರಾ ಅವರವು. ಇಬ್ಬರೂ ಓದುಗರ ಮನಸೆಳೆವ ಹಾಗೆಯೇ ಬರೆದವರು. ವಾಣಿ ಹೂಬಿಡಿಸಿ ಕಟ್ಟುವ ಹುಡುಗಿಯಾದರೆ, ಇಂದಿರಾ ಮರಹತ್ತಿ ಹಣ್ಣು ಕೆಡಹುವ ಚತುರೆ. ಇವೆಲ್ಲದರ ಮೀರಿ ಇಬ್ಬರ ಮನದಿಂಗಿತವೂ ಒಂದೆ. ಹೆಣ್ಣಿನ ಮನೋಲೋಕಕ್ಕೆ ಪುಟ್ಟ ಪುಟ್ಟ ಇಣುಕುಗನ್ನಡಿ ತೋರಿ ಅವರ ಅನನ್ಯತೆಯನ್ನು ಸಾಮಾನ್ಯತೆಯನ್ನು ಮತ್ತು ಸಮಾನ ಮನಸ್ಕತೆಯನ್ನು ಓದುಗರ ಮನಸ್ಸಿನಲ್ಲಿ ನೆಲೆನಿಲ್ಲಿಸುವುದು. ಅವರವರದೇ ರೀತಿಯಲ್ಲಿ ಇಬ್ಬರೂ ಸಮರ್ಥವಾಗಿ ಮಾಡಿದ್ದಾರೆ ಅಂತಲೆ ಅನಿಸುತ್ತದೆ ನನಗೆ ಅವರ ಕೃತಿಗಳನ್ನು ಓದಿ.
ಇವತ್ತಿಗೂ ಎಲ್ಲ ಸಮಾನ ಅನುಕೂಲ-ಸಮಾನ ಅವಕಾಶ ಇತ್ಯಾದಿ ಮೇಲ್ಪದರದ ಹೊದಿಕೆಯ ದೊಡ್ಡ ಮಾತುಗಳ ದಿನಮಾನಗಳಲ್ಲಿ ಕೂಡಾ ಬರೆಯುವ ಹೆಣ್ಣು ಎಲ್ಲರ ಮಗ್ಗಲುಮುಳ್ಳೇ. ಮನೆಯ ಒಳಗೆ ಎಲ್ಲ ಜವಾಬ್ದಾರಿಗಳನ್ನ ನಿರ್ವಹಿಸಿ ನಂತರ ತನ್ನ ಲೋಕಕ್ಕೆ ಅಡಿಯಿಡಬಹುದು. ಒಂದು ಕೆಲಸ ಹೆಚ್ಚುಕಮ್ಮಿ ಆದರೆ ಅವಳು ಬಿಡಿ ಮನೆ ಸಂಸಾರ ಎಲ್ಲ ಬದಿಗಿಡುವ ಜಾತಿ.. ಓದಿದ, ಬರೆಯುವ ಹೆಂಗಸರ ಸಹವಾಸ ಕಷ್ಟ ಎನ್ನಲಾಗುವುದು.
ಹೊರಗೆ ಹಾರ ಕಿರೀಟ ತುರಾಯಿ ಪಲ್ಲಕ್ಕಿಗಳಲ್ಲಿ ರಾಜಮಾರ್ಗದಲ್ಲಿ ಎದೆಯುಬ್ಬಿಸಿ ಸಾಗುವ ಗಂಡು ಸಾಹಿತಿಗಳ ಮುಂದೆ ಹೆಚ್ಚುಗಾರಿಕೆ ತೋರದ ಹಾಗೆ ತನ್ನ ದಾರಿ ಎಷ್ಟೋ ಅಷ್ಟೆ ನಡೆಯಬಹುದು. ಒಂದು ಹೆಜ್ಜೆ ಹೆಚ್ಚೂ ಕಮ್ಮಿ ಆದರೆ ನಿಮ್ಮದೇನು ಬಿಡಿ ಅಡಿಗೆಮನೆ ಸಾಹಿತ್ಯ ಎನ್ನುವರು. ಈಗೀಗ ಗ್ಲೋಬಲ್ ಆದ ಜನಗಳ ಬಾಯಲ್ಲಿ ಹೊಸ ಪದ ಬಂದಿದೆ. ಚಿಕ್ ಲಿಟ್ರೇಚರು. ಹೆಂಗಸರಲ್ವಾ... ಎಂಬ ಮಾತು ಇದ್ದೇ ಇದೆ. ಹೆಚ್ಚು ಹೆಚ್ಚು ಅಕಾಡೆಮಿಗಳ ಪ್ರಶಸ್ತಿಗಳನ್ನು, ಅನುವಾದಗಳನ್ನೂ, ವಿಶ್ವಸಾಹಿತ್ಯದ ನಾಗಾಲೋಟಗಳನ್ನೂ ಸಮರ್ಥವಾಗಿ ಮಾಡುವ ಮಹಿಳಾ ಸಾಹಿತಿಯರಿಗೆ ಅವರ ಸಾಧನೆಯನ್ನೆಲ್ಲ ಹೆಂಗಸಲ್ವಾ ಏನೋ ಮೋಡಿ ಮಾಡಿ ಗೆದ್ದಳು ಎಂಬ ಒಂದು ಮಾತಿನಲ್ಲಿ ಅಳೆದುಬಿಡುತ್ತಾರೆ.
ಇವತ್ತು ಪರಿಸ್ಥಿತಿ ಹೀಗಿದ್ದರೆ ಈಗ ೫೦-೬೦ ವರ್ಷಗಳ ಹಿಂದೆ ೧೯೬೦ ರ ದಶಕದಲ್ಲಿ ಹೇಗಿದ್ದರಬಹುದು ಎಂದು ಸುಲಭವಾಗಿ ಊಹಿಸಬಹುದು. ಜನಪ್ರಿಯವಾದದ್ದೆಲ್ಲ ಅಥವಾ ವಿಪುಲವಾಗಿ ಬರೆದದ್ದೆಲ್ಲ ಶ್ರೇಷ್ಠವಲ್ಲ ಎಂಬ ಪರಂಪರಾಗತವಾದ ನಂಬಿಕೆಯೊಂದು ನಮ್ಮ ಸಾಹಿತ್ಯದ ಬಗ್ಗೆ ಬಾಯೊಡೆದು ಹೇಳದ ಒಂದು ಕಲ್ಪಕ ನಂಬಿಕೆ. ಇದು ನನ್ನದಂತೂ ಅಲ್ಲ. ಆದರೆ ಆ ಕಲ್ಪಿತ ನಂಬುಗೆಯ ಹುಸಿನೊರೆಯಲ್ಲಿ ದಾಖಲೀಕರಣದ ಸಮಯದಲ್ಲಿ ಹಲವು ಜನಪ್ರಿಯ ಬರಹಗಾರರು, ಬರಹಗಾತಿಯರು ಹಿಂದೆ ತಳ್ಳಲ್ಪಟ್ಟರು. ಅವರ ಸಾಹಿತ್ಯದ ಬಗ್ಗೆ, ಮುಖ್ಯವಾಗಿ ಮಹಿಳೆಯರ ಬಗ್ಗೆ ಅಡುಗೆ ಮನೆ ಸಾಹಿತ್ಯ, ಹಿತ್ತಲ ಸಾಹಿತ್ಯ ಇತ್ಯಾದಿಯಾಗಿ ಸದರದ ನಸುನಗೆಯಲ್ಲಿ, ನಗುನಗುತ್ತಲೆ ಚೆನ್ನಾಗಿದೆ ಎಂದು ಹೇಳುತ್ತಲೆ ಸಾಹಿತ್ಯದ ಮುಖ್ಯಭೂಮಿಕೆಯ ಆವರಣದಾಚೆಯಲ್ಲಿ ಅವಜ್ಞೆಯ ಜಾಗವನ್ನು ನೀಡಲಾಯಿತು. ನವೋದಯ, ನವ್ಯ, ನವ್ಯೋತ್ತರ ಗಂಡು ಸಾಹಿತಿಗಳು ವಿಶ್ವಸಾಹಿತ್ಯದಲ್ಲಿ ತಮ್ಮ ಅರಿವಿಗೆ ಅನುಭವಕ್ಕೆ ಬಂದ ಸತ್ಯವನ್ನು ಕಾಸಿ ಸೋಸಿ ಬರಹಕ್ಕಿಳಿಸಿದ್ದಾರೆ. ಹಾಗೆಯೇ ಈ ಕಾಲದಲ್ಲಿ ಬರೆದ ಮಹಿಳೆಯರು ತಮ್ಮ ಅರಿವಿಗೆ, ಅನುಭವಕ್ಕೆ ಬಂದ ಸತ್ಯವನ್ನು ಕಾಸಿ, ಸೋಸಿ, ಪಾಕಮಾಡಿ ಬರಹಕ್ಕಿಳಿಸಿದ್ದಾರೆ. ಅವರು ಅಂಗಳದಲ್ಲಿ, ಬಸ್ ಸ್ಟಾಂಡಿನಲ್ಲಿ, ಗೆಳತಿಯರಲ್ಲಿ, ಸಂತತನದಲ್ಲಿ,ಆಫೀಸಿನಲ್ಲಿ, ರೈಲ್ವೆ ಸವಾರಿಯಲ್ಲಿ, ಹೈವೆಯಲ್ಲಿ, ಹಳ್ಳಿ ಉತ್ಖನನದಲ್ಲಿ, ಸರ್ಕಲ್ ಪಕ್ಕದ ಕಾಫಿ ಹೌಸಿನಲ್ಲಿ ಅನುಭವಕ್ಕೆ ಪಕ್ಕಾಗಿರಬಹುದು. ಆದರೆ ನಮ್ಮ ಮಹಿಳೆಯರ ಲೋಕವೇನು ಸಣ್ಣದಲ್ಲ. ಮನೆ, ಅಂಗಳ, ಕಾಲೇಜು, ಅಡಿಗೆಮನೆ, ಆಫೀಸು-ಮನೆ ಮಧ್ಯದ ತಂತಿನಡಿಗೆ ಬ್ಯಾಲನ್ಸು, ಮಕ್ಕಳು-ಗಂಡನ ನಿಭಾವಣೆ ಮಾಡುತ್ತ ಹೊಳೆದ ಅನುಭಾವದಲ್ಲಿ ಪ್ರಾಮಾಣಿಕವಾಗಿ ಉತ್ಕಟವಾಗಿ ಕೆಲವೊಮ್ಮೆ ಮನಸ್ಸಾಕ್ಷಿ ಚುಚ್ಚುವಂತೆ ಬರೆಯುತ್ತ ಬಂದಿದ್ದೇವೆ. ಚಿಕ್ ಚಿಕ್ಕದಾಗಿ ಬರೆಯುತ್ತಲೇ ಇರುತ್ತೇವೆ. ಇದಕ್ಕೆ ವಾಣಿ,ಇಂದಿರಾರೆ ಪ್ರೇರಣೆ ಮತ್ತು ಶಂಕುಸ್ಥಾಪನೆ ಕೂಡ.

ವಾಣಿ, ಇಂದಿರಾರವರ ನೆನಪಿಗೆ ಮತ್ತು ಈಗ ಬರೆಯುತ್ತಿರುವ ನನ್ನ ಎಲ್ಲ ಸಹಲೇಖಕಿಯರ ಆತ್ಮಗೌರವಕ್ಕೆ ಸತ್ವಕ್ಕೆ ಶರಣೆನ್ನುತ್ತಾ ಈ ಲೇಖನವನ್ನು ಮುಗಿಸುತ್ತೇನೆ.



Monday, December 4, 2017

ಆಧಾರವಿಲ್ಲದ ಪಾಡಿಗೆ...

ಆಧಾರವಿಲ್ಲದ ಪಾಡಿಗೆ...ಬೇಗ ಕಾರ್ಡು ಅಪ್ಲೈ ಮಾಡಿದೆ
ವಿಚಾರವಿಲ್ಲದೆ ಪಕ್ಷಪಕ್ಷಗಳು ನೇಯ್ದ ಬಲೆಯಲಿ ಸಿಕ್ಕಿದೆ
ಆಚಾರ ಪಡೆಯಲು ಪಟ್ಟ ಪಾಡಿಗೆ ಪಡೆದವರ ಕಷ್ಟವೂ ಸೇರಿದೆ
ಪಡೆಯದೆ ಇದ್ದರೂ ಪಡೆವರಿದ್ದರೂ ಅನುಷ್ಠಾನ ಗಾಣದಿ
ಜನ ಸಿಕ್ಕಿ ನುರಿಯುತಿರೆ ಬಿದ್ದೆವು ಅತಂತ್ರ ಜಾಡಿಗೆ...
ಹೇಳಬಾರದೆ ಇದರೊಳಗೇನಿದೆ..?

{ವಿಜಯ ಕರ್ನಾಟಕದಲ್ಲಿ ಈ ಬರಹದ ಸಂಕ್ಷಿಪ್ತ ರೂಪ ಪ್ರಕಟವಾಗಿದೆ.
ಈ ಬರಹದ ಕೆಲವು ಮಹತ್ವದ ಮಾಹಿತಿಗಳನ್ನು ನನಗೆ ಕೊಟ್ಟವರು ಗೆಳೆಯರಾದ ಆನಂದರ ಋಗ್ವೇದಿ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ. }


ಏನಾದರೂ ಮಾತಾಡಿ. ಆಧಾರ್ ಕೇಳಬೇಡಿ...ಎಂಬುದು ಮಹಾನಗರದ ಟ್ರಾಫಿಕ್ಕು ಪೀಡಿತ ಜನರಸಣ್ಣ ನಗರಗಳ ಕೊಳಚೆ ಪೀಡಿತ ಮಹಾಜನರಹಳ್ಳಿ ಊರುಗಳ ಬರ-ಪ್ರವಾಹ ಪೀಡಿತ ಜನರರೈತರಶ್ರಮಿಕರ ಎಲ್ಲರ ಮಾತೂ ಆಗಿದೆ. ಆಧಾರ್ ತಂದ್ರೆ ಮುಂದಿನ ಕೆಲಸ ಎನ್ನುವುದು ಈ ಎಲ್ಲ ನಗರಊರುಗ್ರಾಮಹಳ್ಳಿಗಳನ್ನೂ ಆವರಿಸಿದ ನಮ್ಮ ಸರ್ಕಾರಿ ಆಡಳಿತಯಂತ್ರದ ಪ್ರತಿಯೊಬ್ಬ ಸಿಬ್ಬಂದಿಯದ್ದೂ ಆಗಿದೆ. ಅವರಿಗೂ ಈ ಆಧಾರ್ ಎಂಬುದನ್ನು ನಾವು ಜನರ ಅಸ್ತಿತ್ವದೊಂದಿಗೆ ಲಿಂಕ್ ಮಾಡುವ ಲಾಚಾರ್ ಕೆಲಸದಿಂದಾಗಿ ಸಿಕ್ಕಾಪಟ್ಟೆ ಗ್ರಾಚಾರ್ ಬಂದಿದೆ ಅಂದ್ರೂ ಏನೂ ತಪ್ಪಿಲ್ಲ.
ಇಲ್ಲಿಯವರೆಗೂ ನಾನು ಕನ್ನಡಇಂಗ್ಲಿಷ್ ಪತ್ರಿಕೆಗಳಲ್ಲಿ ವರದಿಗಳಲ್ಲಿ ಈ ಆಧಾರ್ ಅಂದ್ರೆ ಎಂತದುಯಾಕೆ ಬೇಕುಇದರಿಂದ ಕೊಟ್ಟವರಿಗೇನು ಲಾಭ,ಕೊಡಿಸಿಗೆಂಡವರಿಗೇನು ಲಾಭಕೊಡಲುತಗೊಳ್ಳಲುತಗೊಂಡ ಮೇಲೆ ಉಪಯೋಗಿಸಲೂ ಎಲ್ಲರೂ ಯಾಕೆ ಇಷ್ಟು ತಿಣುಕಾಡುತ್ತಿದ್ದೇವೆ. ತಗೊಂಡವರಿರಲಿ,ಉಪಯೋಗಿಸಲು ಹೋದಾಗ ಅದನ್ನು ನಡೆಸಬೇಕಾದವರೂ ಉಪಯೋಗಿಸಿ ಕೆಲಸ ನಡೆಸಬೇಕಾದವರೂ ಹಗಲಿಡೀ..ಹೆಬ್ಬೆಟ್ಟು ಮ್ಯಾಚಾಗಲಿಲ್ಲಕಣ್ಗುಡ್ಡೆ ಸಿಕ್ಕಿ ಹಾಕಿಕೊಳ್ಳಲಿಲ್ಲ ಅಂತ ಭಯಂಕರ ಒತ್ತಡದಲ್ಲಿ ಹರಿಹಾಯುತ್ತಿರುವುದನ್ನಕೈಗೆ ಸಿಕ್ಕಿದರೆ ಚಚ್ಚಿ ಬಿಡುವೆ ಎಂಬ ಕೋಪದಲ್ಲಿ ಕೌಂಟರಿನಾಚೆಗೆ ನಿಂತು ಅವಡುಗಚ್ಚುತ್ತಿರುವ ಜನಸಮೂಹವನ್ನ ನೋಡಿದರೆ ಗಾಬರಿಯಾಗುತ್ತದೆ. ಈ ಅನುಷ್ಠಾನ ಗಾಣದಲ್ಲಿ ಸಿಕ್ಕಿ ನುಗ್ಗಿ ನುರಿಯಾಗುತ್ತಿರುವ ಕೆಳ ಮಧ್ಯಮ ವರ್ಗದ ಶ್ರಮಿಕ ಸಮಾಜದ ಕಷ್ಟ ಗೋಜಲುಗಳನ್ನು ನೋಡಿದರೆ ಕಂಗಾಲಾಗುವ ಪರಿಸ್ಥಿತಿಯೇ ಇದೆ.
ಶಿವಮೊಗ್ಗ ಜಿಲ್ಲೆಯ ಪುಟ್ಟ ಗ್ರಾಮದ ನ್ಯಾಯಬೆಲೆ ಅಂಗಡಿ. ಪರಿತರ ಪಡೆಯಲು ಉದ್ದಕೆ ನಿಂತ ಸರತಿ ಸಾಲು. ಎಲ್ಲರೂ ಹೆಚ್ಚುಕಮ್ಮಿ ಇವತ್ತು ನನ್ನ ಹೆಬ್ಬೆಟ್ಟು ಸರಿಯಾಗಿ ಒತ್ಲಪ್ಪಾ ಅಂತ ಮನೆದೇವರಿಗೆ ಚಿಳ್ಳಪಿಳ್ಳ ಹರಕೆ ಹೊತ್ತು ನಿಂತಿದಾರೆ. 78 ವರ್ಷದ ಮಹಾಲಕ್ಷ್ಮಕ್ಕ ಸಾಲಲ್ಲಿ ಮೊದಲನೆಯವಳು. ಮನೆಯಲ್ಲಿ ಜ್ವರಬಂದು ಮಲಗಿರುವ ಗಂಡ ಶೀನಪ್ಪನಿಗೆ ಗಂಜಿ ಕಾಸಿಟ್ಟು ಪಕ್ಕದಲ್ಲಿಟ್ಟು ಓಡಿ ಬಂದು ನಿಂತದ್ದರಿಂದ ಮೊದಲ ಜಾಗ ಸಿಕ್ಕಿದೆ. ಅವಳ ಇಬ್ಬರು ಮಕ್ಕಳಲ್ಲಿ ಒಬ್ಬ ತಮಿಳುನಾಡಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸದಲ್ಲಿದ್ದಾನೆ. ಒಬ್ಬನು ಬೆಂಗಳೂರಿನ ಗಾರ್ಮೆಂಟು ಫ್ಯಾಕ್ಟರಿಯ ನೌಕರ. ಅವರವರು ಅವರವರ ಸಂಸಾರದಲ್ಲಿ ಮಗ್ನರು. ಇಲ್ಲಿ ಹಳ್ಳಿಯಲ್ಲಿ ಮಹಾಲಕ್ಷ್ಮಕ್ಕ ಮತ್ತು ಅವಳ ಗಂಡ ಇಬ್ಬರೆಕೃಷಿ ಕೆಲಸವಿದ್ದಾಗ ಮೈಯಾಳಿನ ಕೆಲಸ ಮಾಡಿಮನೆಯಂಗಳದಲ್ಲಿ ಚೂರು ಪಾರು ತರಕಾರಿ ಬೆಳೆದುಒಂದು ಹಸುವಿನ ಹಾಲು ಕರೆದು ಜೀವನ ನಡೆಸುತ್ತಾರೆ. ಇವರು ಬಿ.ಪಿ.ಎಲ್ ಕಾರ್ಡು ಹೋಲ್ಡರುಗಳು. ಇಬ್ಬರದೂ ಆಧಾರ ಕಾರ್ಡಿದೆ.
೧೦ ಗಂಟೆಗೆ ಬೈಕಿನಲ್ಲಿ ಬಂದಿಳಿದ ನ್ಯಾಯಬೆಲೆ ಅಂಗಡಿ ಕೃಷ್ಣಪ್ಪ ಸಾಲು ನೋಡಿ ನಿಟ್ಟುಸಿರಿಟ್ಟು ಬಾಗಿಲು ತೆಗೆದ. ಸಾಲಿಗೆ ಜೀವಬಂದು ಮಿಸುಕಾಡಿತು. ಬಾಗಿಲು ತೆಗೆದು ಕಂಪೂಟ್ರು ಚಲಾಯಿಸಿಅದರ ಯೂಪಿಎಸ್ ವೈರ್ ನಿಗಾ ನೋಡಿಅಲ್ಲೆ ಇದ್ದ ತಿರುಪತಿ ತಿಮ್ಮಪ್ಪನ ಫೋಟೋಕ್ಕೆ ಊದುಬತ್ತಿ ಹಚ್ಚಿದ. ಮೊದಲೆ ಬಂದು ಕಾದುಕೊಂಡಿದ್ದ ಅವನ ಸಹಾಯಕ ನಾಗ್ರಾಜು ಹಳೆಬಟ್ಟೆಯಲ್ಲಿ ಟೇಬಲ್ಲಿನ ಧೂಳು ಹೊಡೆದು ಪೆನ್ನುರಷೀದಿಆಧಾರ್‍ ಕಾರ್ಡಿನ ಯಂತ್ರ ಎಲ್ಲವನ್ನೂ ಇಡಬೇಕಾದ ಜಾಗದಲ್ಲಿ ಇಟ್ಟುಇದ್ದ ಒಂದೇ ಒಂದು ಕಿಟಕಿಯ ಬಾಗಿಲು ತೆಗೆದು. ಎಲ್ಲ ಕಾರ್ಡ್ ಎತ್ತಿಟ್ಕೊಳ್ರೀ ಅಂತ ಸಾಲಿಗೆ ಕೂಗು ಹಾಕಿದ. ಎಲ್ಲರೂ ಒಂದೊಂದ್ಸಲ ತಮ್ಮ ತಮ್ಮ ಆಧಾರವನ್ನು ಮುಟ್ಟಿ ನೋಡಿಕೊಂಡು ನೆಟ್ಟಗೆ ನಿಂತರು. ಮಹಾಲಕ್ಷ್ಮಕ್ಕ ಬಂದು ಎಷ್ಟೇ ಹೆಬ್ಬಟ್ಟು ಒತ್ತಿದರೂ ಅವಳ ಹೆಬ್ಬಟ್ಟು ಆಧಾರ್ ಡಾಟಾಬೇಸಿನ ಹೆಬ್ಬಟ್ಟಿಗೆ ಮ್ಯಾಚೇ ಆಗುತ್ತಿಲ್ಲ. ಹೋಗ್ಲಿ ಪಷ್ಟ್ ಕಣ್ಗುಡ್ಡೇನಾದ್ರಾ ಮ್ಯಾಚ್ ಮಾಡ್ಬಿಡಾಣ ಅಂತ ನಾಗ್ರಾಜು ಅಂದಾಗ ಕೃಷ್ಣಪ್ಪ ಗುರಾಯಿಸಿದರೂ ಇರಲಿ ಅದನ್ನೂ ನೋಡುವ ಅಂತ ಪ್ರಯತ್ನ ಪಟ್ಟ. ಅದು ಮ್ಯಾಚಾಯಿತು. ಹೆಬ್ಬೆಟ್ಟು ಆಗುತ್ತಿಲ್ಲ. ನೋಡಪಾ ಹೋಗ್ಲಿ ಇಲ್ಲೆ ನಿನ್ ರಷೀದಿಲಿ ಹೆಬ್ಬಟ್ಟು ಹಾಕಿ ಹೋಗ್ಬಿಡುವೆ. ಇನ್ಯಾವತ್ತಾದ್ರೂ ಬಂದಾಗ ಮತ್ತೆ ಚೆಕ್ಮಾಡು. ಗಂಡ ಹುಷಾರಿಲ್ಲದೆ ಮಲಗಿದಾನೆ. ನಾನು ಬೆಳಗ್ಗೆ ಎದ್ದು ಹಂಗೇ ಇಲ್ಬಂದೆ ಅಂತ ಅವಳೆಷ್ಟು ಗೋಗರೆದರೂ ಜಪ್ಪೆನ್ನದ ಕೃಷ್ಣಪ್ಪ.. ಇನ್ನೊಂದು ನಾಕು ಜನದ್ ಆಗೋವರೆಗೆ ಅಲ್ಲೆ ಹೊರಗೆ ಕುಂತಿರವ್ವ. ಹಂಗೆಲ್ಲ ಮಾಡಿ ಕೊಟ್ಟರೆ ನನ್ನ ಕೆಲ್ಸ ಹೋಗುವುದು ಎಂದು ಅವಳನ್ನು ಹೊರಕಳಿಸಿದ. ಮತ್ತೆ ನಾಕು ಜನರ ಮ್ಯಾಚಿಂಗು ನಡೆಯಿತು. ಒಬ್ಬೊಬ್ಬರದೂ ಒಂದೆರಡು ಬಾರಿಯಾದರೂ ಮ್ಯಾಚಿಂಗ್ ಸರಿ ಮಾಡಿಬಿಲ್ ತೆಗೆದು ಅವರ ಪಡಿತರ ಕೊಡುವ ಹೊತ್ತಿಗೆ ಒಂದು ಗಂಟೆಗೂ ಹೆಚ್ಚು ಹೊತ್ತು ಹಿಡಿಯಿತು. ಮತ್ತೆ ಲಕ್ಷ್ಮವ್ವನ ಕರೆದು ಮ್ಯಾಚ್ ಮೇಕಿಂಗ್ ನಡೆಸಿದರೆ ಉಸ್ಸಪ್ಪ ಈ ಸಲವೂ ಆಗಲಿಲ್ಲ. ಬಾಯಿಗೆ ಬಂದ ಹಾಗೆ ಬೈದುಕೊಂಡು ಅವಳು ಮತ್ತೆ ಹೊರನಡೆದಳು. ಇನ್ನೂ ಇಬ್ಬರಿಗೆ ಅರ್ಧ ಗಂಟೆ ಮ್ಯಾಚ್ ಮಾಡಿ ಪಡಿತರ ಕೊಟ್ಟ ಮೇಲೆ ಮುದುಕಿಯ ನೋಡಲಾಗದೆ ಮತ್ತೆ ನೋಡಿದರೆ ಈಗಲೂ ಮ್ಯಾಚಾಗಲಿಲ್ಲ. ಹೋಗಲಿ ನಿನ್ ಗಂಡನ್ನೆ ಕಳ್ಸು ಲಕ್ಷ್ಮವ್ವ ಎಂದವನ ಮೇಲೆ ಅವಳು ಕವಕ್ಕನೆ ಹಾರಿ ಬಿದ್ದಳು. ಜ್ವರ ಬಂದು ಎದ್ದೇಳಲಾರದೆ ಬಿದ್ದವನ ಕಳಿಸಲೇನಪ್ಪಾಭಾಳ ಕಲ್ತೀಯ ಬಿಡು ನೀನು. ನ್ಯಾಯವಾಗಿ ಕಾರ್ಡು ಕೊಟ್ಟು ಹೆಬ್ಬೆಟ್ಟೊತ್ತಿದರೆ ಪಡಿತರ ಕೊಡ ಒಲ್ಯಲ್ಲಾ..ನಿನ್ನ ಸಂಸಾರ ಉದ್ಧಾರಾಗಲ್ಲ ಬಿಡು ಅಂದು ಶಾಪ ಹೊಡೆದು ಚಿಂತೆಯಿಂದ ಮನೆ ಕಡೆ ತೆರಳಿದಳು. ಅವಳ ಶಾಪ ತಟ್ಟಿದ ಹಾಗೆ ಕರೆಂಟು ಹೋಯಿತು. ಸರಿಯಾಗಿರ್ ಚಾರ್ಜಿರದ ಯುಪಿಎಸ್ಸು ಕುಂಯ್ಯೆಂದು ಮಲಗಿತು. ಉದ್ದಕೆ ನಿಂತ ಸಾಲಲ್ಲಿ ಇನ್ನೂ ಇಪ್ಪತ್ತು ಜನರೇ ಇದ್ದರು. ಅವರೆಲ್ಲರ ಒಳಶಾಪಗಳ ಧಗೆ ಕೃಷ್ಣಪ್ಪನಿಗೆ ತಟ್ಟುತ್ತಲೆ ಇತ್ತು. ಸಾಲಿನಲ್ಲಿದ್ದ ಇಬ್ಬರು ಮಾತಾಡಿಕೊಳ್ಳುತ್ತಿದ್ದರು. ಮದ್ಲೆಲ್ಲ ಪಡಿತರಕ್ಕೆ ಬೆಳ್ಗೆಒಂಭತ್ತಕ್ಕೆ ಬಂದರೆ ಹನ್ನೊಂದ್ರೊಳಗೆ ಮುಗ್ಸಿ ಅವತ್ತಿನ ಕೂಲಿಗೂ ಹೋಗಕ್ಕೆ ಆಗ್ತಿತ್ತು. ಈಗ ದೇವರ ದಯವಿದ್ದರೆ ಅವತ್ತಿಡೀ ನಿಂತರೆ ಸಿಕ್ಕರೆ ಸಿಕ್ಕಿತು ಇಲ್ದಿದ್ರೆ ಇಲ್ಲ. ಅದಕ್ಕೂ ನಸೀಬಿರ್ಬೇಕು. ಹಂಗಾಗಿದೆ ಅಲ್ವಾ ಪರಶ್ಯಾ...ಅಂದ
ಬರೀ ನಸೀಬಲ್ಲ ಕರೆಂಟಿರ್ಬೇಕು ಮತ್ತು ನಮ್ ಹೆಬ್ಬೆಟ್ಟು ನಮಗೇ ಮ್ಯಾಚಾಗಬೇಕು ಕಣಯ್ಯಾ..ಅಂದ ಪರಶಮನೆಗೆ ಹೋಗಿ ಮಧ್ಯಾಹ್ನ ಊಟಕ್ಕೆ ಕುಂತು ಟೀವಿ ಹಚ್ಚಿದರೆ ಟೀವಿಯಲ್ಲಿ ಜಾಹೀರಾತು ಬರುತ್ತಿತ್ತು. ನಾನೇ ರಾಜಕುಮಾರ...ಪ್ರೌಡ್ ಇಂಡಿಯನ್ನುನನ್ನತ್ರ ಆಧಾರಿದೆ. ಯೂನಿಕ್ ಐಡೆಂಟಿಟಿ. ನಿಮ್ಮತ್ರ ಇದ್ಯಾಆಧಾರ್ ಮಾಡ್ಸಿ.. ಬೀ ಎ ಪ್ರೌಡ್ ಇಂಡಿಯನ್ ಅಂತ..ಸಿನಿಮಾನಟರು ಹೆಬ್ಬೆಟ್ಟೆತ್ತುತ್ತಿದ್ದರು. ಇವನವ್ವನ್ ಆಧಾರ್ ಇಲ್ದಿದ್ರೆ ನಾವು ಇಂಡ್ಯನ್ಸೆ ಅಲ್ವಾ ಹಂಗರೆಇವರೆಲ್ಲ ಸಾಲಲ್ಲಿ ನಿಂತ್ಕಂಡ್ ಒಂದಿನ ಪಡಿತರ ತಕ್ಕಂಬೇಕು ಅವಾಗ್ಗೊತ್ತಾಗತ್ತೆ ಪ್ರೌಡ್ ಇಂಡ್ಯನ್ ಅಂದ್ರೆ ಏನಂತ.. ಹೆಬ್ಬೆಟ್ಟೆತ್ತಿದ್ರೆ ಮುಗೀತಾಒತ್ಸಿ ಮ್ಯಾಚ್ ಮಾಡಿಸ್ಬೇಕು ನನ್ ಮಕ್ಳಿಗೆ ಅಂತ ಗೊಣಗುತ್ತಿದ್ದ.
ಇತ್ತ ನ್ಯಾಯಬೆಲೆ ಕೃಷ್ಣಪ್ಪ ಈ ಆಧಾರ್ ಕಂಡು ಹಿಡಿದವನಿಗೆ ಶಾಪ ಹಾಕುತ್ತಾ ಮೊಬೈಲು ಪೋನಿನ ನೆಟ್ ಪ್ಯಾಕ್ ಆನ್ ಮಾಡಿ ನೋಡಿದರೆ ಅವತ್ತಷ್ಟೆ ಚನ್ನಗಿರಿಯ ಯಾವುದೋ ನ್ಯಾಯಬೆಲೆ ಅಂಗಡಿಯಲ್ಲಿ ನಕಲಿ ಬಿಪಿಎಲ್ ಕಾರ್ಡುಗಳನ್ನಿಟ್ಟುಕೊಂಡು ಪಡಿತರ ಅವ್ಯವಹಾರ ಮಾಡಿದ ಆ ಊರಿನ ನೇತಾರ ಮತ್ತು ನ್ಯಾಯಬೆಲೆ ಅಂಗಡಿ ಸಿಬ್ಬಂದಿಯ ಬ್ರೇಕಿಂಗ್ ನ್ಯೂಸಿನ ಲಿಂಕಿತ್ತು. ನೋಡಿ ಬೆಚ್ಚಿಬಿದ್ದವನಿಗೆ ಈ ಆಧಾರು ಪಡಪೋಸಿಯಲ್ಲ ಆದ್ರೆ ಸರಿಯಾಗಿ ಮಾಡ್ಲಿಲ್ಲ ಮಾತ್ರ ಅಂತ ಒಳಗೊಳಗೇ ಅನ್ನಿಸಿತು.
ಅರೆ ನಮ್ಮೂರಿನ ಪಕ್ಕದ ಊರಿನ ನ್ಯೂಸ್ ಬಂದಿದೆಯಲ್ಲ ಅಂತ ರಾಜೇಶ ಪೇಪರೋದಿದವನುಯಾರೋ ಪಾಪ ಫ್ಯಾಮಿಲಿ ಫ್ಯಾಮಿಲೀನೆ ಆಧಾರ್ ಇಲ್ಲದೆ ಪಡಿತರ ಸಿಕ್ಕದೆ ಉಪವಾಸ ಬಿದ್ದು ಸತ್ತೋಗ್ತಿದಾರಂತೆ. ಅಲ್ಲ ಆ ಊರಿನ ಜನ ಏನು ಮನುಷ್ಯರಲ್ವಾ... ಸ್ವಲ್ಪ ನೋಡ್ಕಂಡ್ ಬರ್ತೀನಿ ಅಂದು ಬೈಕು ಹತ್ತಿದ.
ಆ ಊರಿನ ಎಂಟ್ರನ್ಸಲ್ಲೆ ಇದ್ದ ಕಾಮತ್ ಟೀ ಅಂಗಡಿಯಲ್ಲಿ ಒಂದು ಖಡಕ್ ಚಾ ಆರ್ಡರ್ ಮಾಡಿ ಸಿಗರೇಟು ಹೊತ್ತಿಸಿಕೊಂಡು ಅಂಗಡಿಯವನನ್ನು ಕೇಳಿದ. ಅಂಗಡಿಯವ ಸಣ್ಣಗೆ ನಗುತ್ತಅದು ಪೇಪರ್ರಲ್ಲಿ ಇವತ್ತು ಬಂದಿದೆ. ನಿನ್ನೇನೆ ಟೀವಿಲೆಲ್ಲ ಬ್ರೇಕಿಂಗ್ ಆಯ್ತಲ್ಲಾ ಮಾರ್ರೆ.. ನೀವು ಯಾ ಪೇಪರಿನೋರುಅಂದ. ರಾಜೇಶ್ ಹೌದಾ..ಪೇಪರ್ ಗೀಪರ್ ಎಂತ ಇಲ್ಲ. ಅಲ್ಲ ನೀವು ಎಂತ ಜನ ಕಣಯ್ಯಾ. ಒಂದು ಫ್ಯಾಮಿಲೀನೆ ರೇಷನ್ ಇಲ್ದೆ ಸಾಯ್ತಾ ಬಿದ್ದಿದೆ ಅಂದ್ರೆ ಸ್ವಲ್ಪ ಸಹಾಯ ಮಾಡದು ಬ್ಯಾಡ್ವಾನಿಮ್ಮೂರು ಪಂಚಾಯ್ತಿ ಲೀಡ್ರು ಯಾರುಅಂತ ಸ್ವಲ್ಪ ಗದರಿಸಿದ. ಅಂಗಡಿಯವ ಗರಮ್ಮಾಗಿ ಅಂದ. ಊಟ ಇಲ್ದೆ ಸತ್ತಿದ್ರೆ ಯಾರಾದ್ರೂ ಸಹಾಯ ಮಾಡ್ತಾ ಇರ್ಲಿಲ್ವೇನಯ್ಯಾನಿಂಗೇನು ಗೊತ್ತು ಈ ಊರ ಸಮಾಚಾರಅವು ಸತ್ಕಂಡು ಬಿದ್ದಿರದು ರೇಷನ್ನಲ್ಲಿ ಆಧಾರ್ ಮ್ಯಾಚಗ್ಲಿಲ್ಲಾಂತ ಗಲಾಟಿ ಮಾಡ್ಕಂಡು ಹೋಗಿ ಹೊಟ್ಟೆ ತುಂಬ ಕುಡ್ದು ಸತ್ತಿದ್ದು. ೨೪/೭ ಟೀವಿಯವರಿಗೆ ಇದೇ ಅಲ್ವಾ ಬೇಕಾಗಿರೋದು. ಆಧಾರ್‍ ಮ್ಯಾಚಾಗ್ಲಿಲ್ಲ ಅಂತ ಗೊತ್ತಾಯ್ತು. ಎಲ್ಲಿ ಕೇಳಿದ್ರು. ರೇಷನ್ ಅಂಗ್ಡೀಲಿ ಅಂದ್ರು. ಒಂದಕ್ಕೊಂದು ಸೇರಿಸ್ಕೊಂಡು ಆಧಾರ್ ಲಿಂಕಾಗದ ಕುಟುಂಬ ಪಡಿತರ ಸಿಗದೆ ಹಸಿವಿನಿಂದ ಸತ್ತು ಬಿದ್ದರು ಅಂತ ಬಿದ್ದಿದ್ದನ್ನೇ ಮತ್ ಮತ್ತೆ ಫೋಕಸ್ ಮಾಡಿ ತೋರ್ಸಿದ್ರು....ರಾಜೇಶ ತಣ್ಣಗಾದ.
ಜಿಲ್ಲಾ ಆಸ್ಪತ್ರೆಯಲ್ಲಿ ಇನ್ಷೂರೆನ್ಸ್ ಕ್ಲೈಮ್ ಮಾಡಲು ಬಂದ ಮಹದೇವಯ್ಯನವರನ್ನು ಸಿಬ್ಬಂದಿ ಆಧಾರ್ ಕಾರ್‍ಡು ಕೊಡಲು ಕೇಳಿದರೆ ರೇಗಿಬಿದ್ದರು. ಯಾವನ್ಲಾ ಅದು ಆಧಾರ್ ಕೇಳದು. ನಾನು ನಾಗೇನಹಳ್ಳಿಯ ಮಾದೇವಯ್ಯ. ಊರ್ನಾಗೆ ಯಾರನ್ನಾದ್ರೂ ಕೇಳ್ಕಂಡ್ಬನ್ನಿ ನಾನು ಯಾರು ಹೇಳ್ತರೆ. ಇಲ್ನೋಡು ನನ್ನ ವೋಟರ್ ಐಡಿ. ಇಲ್ಲಿದೆ ನೋಡು ನನ್ನ ಯಶಸ್ವಿನಿ ಕಾರ್ಡು. ಇನ್ಸೂರೆನ್ಸ್ ಕೊಟ್ರೆ ಸರಿಇಲ್ಲಂದ್ರೆ ಪೋಲಿಸ್ ಕಂಪ್ಲೈಂಟ್ ಕೊಡ್ತೀನಿ ಅಂತ ಕೂಗಾಡಿದರು. ಅಷ್ಟರಲ್ಲಿ ಅವರ ಹತ್ತಿರ ಬಂದ ಮೇಲಧಿಕಾರಿಯೊಬ್ಬರ ಮುಖ ನೋಡಿದವರೆ ಮೆತ್ತಗಾದರು. ನೋಡಿ ಇವ್ರೇ ಹೋದ್ವರ್ಸ ನೀವೇ ತಾನೆ ನನ್ ಯಶಸ್ವಿನಿ ಕಾರ್ಡು ಎರಿಫೈ ಮಾಡಿ ದುಡ್ ಕೊಟ್ಟಿದ್ದು. ಅದೇ ಯಶಸ್ವಿನಿ ಕಾರ್ಡೇ ಇದು. ದಯವಿಟ್ಟು ಮಾಡ್ಕೊಡಿ. ತುಂಬ ತೊಂದ್ರೆಲಿದೀನಿ. ದುಡಿಯೋ ವಯಸ್ಸಲ್ಲಿ ನನ್ ಹೆಂಡತಿ ಕಾಯಲೆ ಬಿದ್ದವ್ಳೆ. ಅಂತ ಕೈಮುಗಿದರು.
ಮೇಲಧಿಕಾರಿ ಅಸಹಾಯಕರಾದರೂ ಅವರನ್ನು ಮಾದೇವಯ್ನೋರೆ ಬನ್ನಿ ಇಲ್ಲಿ ಕೂತ್ಗಂಡು ಮಾತಾಡಣ ಅಂತ ಒಳಗೆ ಕರ್ಕೊಂಡು ಹೋಗಿ ಅವರಿಗೆ ಆಧಾರ್ ಕಾರ್ಡ್ ಲಿಂಕಿನ ಅವಶ್ಯಕತೆಯನ್ನ ಹೇಳತೊಡಗಿದರು.
ಕೌಂಟರಿನಲ್ಲಿನ ಸಿಬ್ಬಂದಿ ನಾವೇ ಏನೋ ಆಧಾರ್‍ ಮಾಡ್ಬಿಟ್ವೇನೋ ಅನ್ನೋ ಹಂಗೆ ಕೂಗಾಡ್ತನೆನಮ್ ಕಷ್ಟ ನಮ್ದು. ಈ ಆಧಾರ್ ಲಿಂಕ್ ಮಾಡಕ್ಕೆ ಹೋಗಿ ಒಂದಿನ ಮಾಡ ಕೆಲ್ಸ ನಾಕ್ ದಿನ ಆಗ್ತದೆನಮ್ ಗೋಳು ಕೇಳೊರಿಲ್ಲ. ಜನ ಮಾತ್ರ ನಮ್ನೆ ದಬಾಯಿಸ್ತಾರೆ ಅಂತ ಬೈಕೊಳ್ತ ಇದ್ದರು.
ಪದೇ ಪದೇ ತಮ್ಮ ಮೊಬೈಲಿಗೆ ಬರುತ್ತಿದ್ದ ಆಧಾರ್ ಲಿಂಕ್ ಮಾಡಿ ಮೆಸೇಜು ನೋಡಿ ಶಾಮರಾಯರು ಸ್ವಲ್ಪ ಗಾಬರಿಯಾಗಿದ್ದರು. ಏರ್ಟೆಲ್ಲಿನವನ ಅಂಗಡಿಗೆ ಆಧಾರ್ ಕಾರ್ಡೆ ಹಿಡಿದುಕೊಂಡು ಹೋದರೂ.. ಅವನು ಆಧಾರ್‍ ಲಿಂಕ್ ಮಾಡಲು ನೋಡಿದರೆ ಅದು ಇವರ ಹೆಬ್ಬೆಟ್ಟಿಗೆ ಮ್ಯಾಚು ಮಾಡುತ್ತಿರಲಿಲ್ಲ. ಪಕ್ಕದಲ್ಲಿ ತಮ್ಮ ಹಾಗೆಯೇ ಬಂದಿದ್ದ ಇನ್ನೊಬ್ಬ ಹೆಂಗಸಿಗೂ ಹೆಬ್ಬೆಟ್ಟು ಮ್ಯಾಚಾಗಿ ಕಣ್ಗುಡ್ಡೆ ಮ್ಯಾಚಾಗದಿದ್ದನ್ನು ಗಮನಿಸಿದ್ದರು. ಮೂರು ನಾಲ್ಕು ಸಲ ಹೋದಾಗಲೂ ಇದೇ ರೀತಿ ಆದಾಗ ಆ ಏರ್ಟೆಲ್ ಅಂಗಡಿಯವನು ನಿಮ್ ಆಧಾರ್‍ ಕಾರ್‍ಡನ್ನೆ ಮತ್ತೆ ಸರಿ ಮಾಡಿಸಿಕೊಳ್ಳಿ ಸಾರ್ಹೆಬ್ಬೆಟ್ಟು ಮ್ಯಾಚಿಂಗ್ ಸರಿಯಾಗಿಲ್ಲ ಅಂದಾಗ ಅವರ ತಲೆಬಿಸಿಯಾಗಿತ್ತು. ಆ ಬೆಂಗ್ಳೂರು ಒನ್ ಕೇಂದ್ರ ಅದರಲ್ಲಿ ಬೆಳಿಗ್ಗೇನೆ ಹೋಗಿ ಟೋಕನ್ ತರೋದುಸಾಲಲ್ಲಿ ನಿಂತು ತಮ್ಮ ಸರದಿ ಬಂದಾಗಅಯ್ಯೋ ಇವನೊಬ್ನು ಬಂದ್ನಲ್ಲ ಎಂಬಂತೆ ತನ್ನ ಕಡೆ ಕನಿಷ್ಟವಾಗಿ ನೋಡುವ ಸಿಬ್ಬಂದಿಹೆಬ್ಬೆಟ್ಟುಗಳ ಮ್ಯಾಚಿಂಗ್ ಆಗದೆ ಗೋಳು ಹುಯ್ಯುವ ಆ ಹೆಬ್ಬೆಟ್ಟು ನೋಂದಣಿ ಯಂತ್ರಬೆಳಕು ಸರಿಯಾಗಿಲ್ಲದೆ ಅರ್ಧ ಗಂಟೆ ಫೋಟೋ ತೆಗೆಸಿಕೊಳ್ಳಬೇಕಾದ ಕರ್ಮ... ಕಣ್ಬಿಡ್ರೀಹೆಗಲೆತ್ತಿಇಲ್ಲೇ ನೋಡಿಸ್ವಲ್ಪ ಕುತ್ಗೆ ತಿರುಗ್ಸಿ ಅಂತ ಸಿಡಿಗುಟ್ಟುವ ಆ ಸಿಬ್ಬಂದಿ ಹೆಂಗಸು.... ಇದೆಲ್ಲ ನೆನಪಾಗಿ ಈ ಫೋನೂ ಬೇಡಾ ಆಧಾರೂ ಬೇಡ ಅನ್ನಿಸಿ ಮನೆಗೆ ಬಂದುಬಿಟ್ಟರು.
ಇವೆಲ್ಲ ನಮ್ಮ ಸುತ್ತಲೂ ಸಂಭವಿಸುತ್ತಿರುವ ಆಧಾರ್ ಎಂಬ ಯುನಿಕ್ ಐಡೆಂಟಿಫಿಕೇಶನ್ ನಂಬರ್ ಎಂಬ ರಾಷ್ಟ್ರೀಯಗುರುತಿಸುವಿಕೆ ಪದ್ಧತಿಯ ವಿರಾಟ್ ಸ್ವರೂಪಗಳ ನಾಲ್ಕೆಂಟು ಬಿಂಬಗಳು ಅಷ್ಟೆ. ಮೊದಲು ಈ ಯೂನಿಕ್ ಐಡಿ ಎಂದರೆ ಏನು ನೋಡುವ. ನಮ್ಮ ದೇಶದಲ್ಲಿ ಎಲ್ಲ ನಾಗರಿಕರಿಗೂ ಮಕ್ಕಳುವಯಸ್ಕರುವೃದ್ಧರುಅಕ್ಷರಸ್ಥರುಅನಕ್ಷರಸ್ಥರುಅನುಕೂಲ ಇದ್ದವರು ಇಲ್ಲದವರು ಎಲ್ಲರಿಗೂ) ಅನ್ವಯವಾಗುವ ಹಾಗೆ ಒಂದು ಗುರುತಿನ ಚೀಟಿ ಇಲ್ಲ. ಉದಾಹರಣೆಗೆ:
  • ೧೮ ವರ್ಷದ ಒಳಗಿನವರು ವೋಟ್ ಮಾಡುವುದಿಲ್ಲವಾದ್ದರಿಂದ ಅವರಿಗೆ ವೋಟರ್ ಐಡಿ ಇಲ್ಲ. ಹಾಗಾಗಿ ಅವರಿಗೆ ಈ ಗುರುತಿನ ಚೀಟಿ ಇಲ್ಲ. ಮನೆಯಲ್ಲಿ ರೇಶನ್ ಕಾರ್ಡಿದ್ದರೆ ಅವರ ಗುರುತಿಗೊಂದು ಅವಕಾಶವಿದೆ ಇಲ್ಲವಾದರೆ ಅದಿಲ್ಲ.
  • ಆದಾಯ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಐಟಿ ಕಟ್ಟದೆ ಇರುವ ವರ್ಗಕ್ಕೆ ಪ್ಯಾನ್ ಅವಶ್ಯಕತೆ ಅಲ್ಲಅವರು ಪ್ಯಾನ್ ಕಾರ್ಡು ಮಾಡಿಸುವುದಿಲ್ಲ.
  • ಡ್ರೈವಿಂಗ್ ಮಾಡದಿರುವವರಿಗೆ ಡಿ.ಎಲ್ ಬೇಕಿಲ್ಲ ಹಾಗಾಗಿ ಡಿ.ಎಲ್ ಎಂಬುದನ್ನೆ ಒಂದು ಗುರುತಿಸುವಿಕೆಯ ಮಾನದಂಡವಾಗಿ ಉಪಯೋಗಿಸಲು ಬರುವುದಿಲ್ಲ.
  • ಸರ್ಕಾರಿ ಕಛೇರಿಗಳಲ್ಲಿ ಇರುವವರಿಗೆ ಒಂದು ಗುರುತುಚೀಟಿ ಇದ್ದರೂ ಬೇರೆ ಖಾಸಗಿ ಕೆಲಸದಲ್ಲಿರುವವರ ಗುರುತುಚೀಟಿ ಸರ್ಕಾರಿ ಕೆಲಸಕ್ಕೆ ಅಥವಾ ಸರ್ಕಾರಿ ಉಪಯೋಗಕ್ಕೆ ಬರುವುದಿಲ್ಲ.
  •  ಪಾಸ್ ಪೋರ್ಟ್ ಒಂದು ಅತ್ಯುತ್ತುಮ ಗುರುತುಚೀಟಿಯಾದರೂ ಅದು ಅವಶ್ಯಕತೆ ಇದ್ದವರು ಮಾತ್ರ ಮಾಡಿಸುತ್ತಾರೆ.
ಈ ತರಹದ ಕಾರಣದಿಂದಾಗಿ ಇಡೀ ದೇಶದ ಎಲ್ಲ ನಾಗರಿಕರಿಗೂ ಒಂದು ಸಮಾನ ಗುರುತುಚೀಟಿ ಅಥವ ಯುನಿಕ್ ಐಡೆಂಟಿಫಿಕೇಶನ್ ಆಗಿ ಎಲ್ಲ ದಾಖಲೆಗಳಲ್ಲೂ ಉಪಯೋಗಿಸಬಹುದಾದ ಈ ಆಧಾರ್ ನಿಜವಾಗಲೂ ಒಂದು ಅತ್ಯುತ್ತಮ ಪರಿಕಲ್ಪನೆ.
ಇದರ ಪ್ರಕಾರ ಆಧಾರ್ ಕಾರ್ಡೆಂದರೆ ಒಂದು ಅನನ್ಯ ಗುರುತಿನ ಚೀಟಿ. ಚೀಟಿ ಹೊಂದುವವರ ಅನುಮತಿಯ ಮೇರೆಗೆ ಅವರ ಬಯೋಮೆಟ್ರಿಕ್ ವಿವರವನ್ನೂ ಹೊಂದುವುದರಿಂದ ಇಲ್ಲಿಯವರೆಗೆ ಮಾಡಿದ ಹಾಗೆ ಮುಖ/ಫೋಟೋ ಗುರುತಿನ ಮೇಲೆ,
ವಿಳಾಸದ ದಾಖಲೆಯ ಮೇಲೆ ಆ ಚೀಟಿಯನ್ನು ಹೊಂದಿದವರ ದಾಖಲೆಗಳನ್ನು ನಕಲು ಮಾಡಲಾಗುವುದಿಲ್ಲ. ಈ ಗುರುತುಚೀಟಿಯನ್ನು ತಮ್ಮದೆಂದು ಸಾಬೀತು ಪಡಿಸಲು ನಾವು ನಮ್ಮದೇ ಹೆಬ್ಬೆಟ್ಟು ಮತು ಕಣ್ಣುಗುಡ್ಡೆ (ಐರಿಸ್) ದಾಖಲನ್ನು ಸಾಬೀತು ಮಾಡಬೇಕಾಗುತ್ತದೆ. ಏನನ್ನು ನಕಲು ಮಾಡಿದರೂ ಈ ಎರಡನ್ನು ನಕಲು ಮಾಡಲು ಬರುವುದಿಲ್ಲ. ಇಡೀ ಪ್ರಪಂಚದಲ್ಲಿ ಯಾರಿಗೂ ಒಂದೇ ತರಹದ ಕಣ್ಣುಗುಡ್ಡೆ ಇರುವುದೇ ಇಲ್ಲ. ಹಾಗಾಗಿ ಇದು ಹೆಚ್ಚು ದಕ್ಷ ಗುರುತಿನ ಚೀಟಿ.
  • ಇದು ಕಾರ್ಯಗತವಾದರೆ:
  • ·       ದೇಶದ ಎಲ್ಲ(ಬಹುಪಲು) ನಾಗರಿಕರಿಗೆ ಒಂದೇ ಗುರುತಿಸುವಿಕೆಯ ದಾಖಲೆ ಇರುತ್ತದೆ.
  • ·       ಡಿಜಿಟಲ್ ರೂಪದಲ್ಲಿ ಈ ದಾಖಲೆ ಇರುವುದರಿಂದ ಎಲ್ಲ ಬಗೆಯ ಡಿಜಿಟಲ್ ವ್ಯವಹಾರಗಳಲ್ಲಿ ಇದನ್ನು ಉಪಯೋಗಿಸುವುದು ಸುಲಭ. (ಬ್ಯಾಂಕ್ ವ್ಯವಹಾರ,ಸಿಬ್ಬಂದಿಯ ಸಂಬಳಪಡಿತರವಿಮೆಲೈಸನ್ಸು ಇತ್ಯಾದಿ ದಾಖಲೆಗಳನ್ನು ಹೊಂದಲು ಬೇಕಾದ ವಿಚಾರಣೆಅನುದಾನಗಳುಸಬ್ಸಿಡಿಗಳುಆದಾಯ ತೆರಿಗೆವೋಟರ್ ವ್ಯವಸ್ಥೆರಾಷ್ಟ್ರೀಯ ಭದ್ರತೆ ಮುಂತಾದವು) ಎಲ್ಲದಕ್ಕೂ ಈ ಯುನಿಕ್ ಐಡೆಂಟಿಫಿಕೇಶನ್ ಅನುಕೂಲಿಸುತ್ತದೆ.
  • ·       ಯಾವುದೇ ಅನುಕೂಲಅನುದಾನಸಬ್ಸಿಡಿ ಇತ್ಯಾದಿಗಳಲ್ಲಿ ನಕಲು ಮಾಡುವುದು ಅಸಾಧ್ಯವಾಗುತ್ತದೆ. (ಉದಾಹರಣೆ ನಕಲಿ ಐಡಿಗಳನ್ನು ಮಾಡಿ ಬಿ.ಪಿ.ಎಲ್ ಕಾರ್ಡುಆದಾಯ ಕಾರ್ಡುವೋಟರ್ಸ್ ಐಡಿಪಾಸ್ಪೋರ್ಟು ಇತ್ಯಾದಿ ಮಾಡಲು ಸಾಧ್ಯವಾಗುವುದಿಲ್ಲ.
  • ·       ತಾತ್ವಿಕವಾಗಿ ಇದು ಭ್ರಷ್ಟ ವ್ಯಾಪಾರಗಳಿಗೆ ಕಡಿವಾಣ ಹಾಕುತ್ತದೆ. (ಒಂದು ಮಾಹಿತಿಯ ಪ್ರಕಾರ ಸಣ್ಣ ನಗರಸಭೆಯೊಂದರಲ್ಲಿ ಚುನಾವಣೆಗೆ ಮುಖಂಡರೊಬ್ಬರು ೫೦೦೦ ವೋಟರ್ ಐಡಿಗಳನ್ನು ಒಬ್ಬರೇ ಇಟ್ಟುಕೊಂಡು ನಕಲಿ ಮತದಾನ ಮಾಡಿಸಿದರು. ಸಾಮಾನ್ಯವಾಗಿ ಇದು ನಡೆಯುವಾಗ ಮತದಾನ ಮುಗಿಯುವ ಕೊನೆಯ ಅರ್ಧಗಂಟೆಯಲ್ಲಿ ಜನರು ಎಲ್ಲೆಲ್ಲಿಂದಲೋ ಬಂದು ಮತ ಹಾಕುತ್ತಾರೆ. ಕೌಂಟರಿನಲ್ಲಿರುವವರು ಐಡಿ ಇದೆಯೇ ಎಂದು ಪರಿಶೀಲಿಸಿ ಮತ ಹಾಕಿಸುತ್ತಾರೆ. ಕೊನೆಯ ಅರ್ಧ ಗಂಟೆಯಾಗಿರುವುದರಿಂದ ಮುಖ ಪರಿಶೀಲನೆ ಮತ್ತು ಸಾಬೀತುಪಡಿಸುವಿಕೆಗೆ ಅಂತಹ ಮಹತ್ವ ಕೊಡಲಾಗುವುದಿಲ್ಲ. ಈ ರೀತಿಯಲ್ಲಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವ ಕಳ್ಳವ್ಯವಹಾರವನ್ನು ಬಯೋಮೆಟ್ರಿಕ್ ಐಡೆಂಟಿಫಿಕೇಶನ್ ಇರುವ ಆಧಾರ್ ಕಾರ್ಡಿನಲ್ಲಿ ನಡೆಸಲಾಗುವುದಿಲ್ಲ)ನೂರಾರು ಬಿ.ಪಿ.ಎಲ್ ಕಾರ್ಡುಗಳನ್ನು ಒಂದು ಕುಟುಂಬದ ವಿವರಗಳ ಮೇಲೆ ತಯಾರಿಸಿ ಏಮಾರಿಸಲಾಗುವುದಿಲ್ಲ. ಪಾಸ್ಪೋರ್ಟ್ ದುರುಪಯೋಗ ತಡೆಗಟ್ಟಬಹುದು.
  • ·       ಮುಖ್ಯವಾಗಿ ಹಲವಾರು ಪ್ಯಾನು ಮತ್ತು ಹಲವಾರು ಅಕೌಂಟು ಇಟ್ಟುಕೊಂಡು ಆದಾಯವನ್ನು ಮರೆಮಾಚಲಾಗುವುದಿಲ್ಲ. ಅನೈತಿಕವಾಗಿ ವಿವರಗಳನ್ನು ಸೃಷ್ಟಿಸಿ ತಮ್ ತಮ್ಮ ಹಲವಾರು ಐಡೆಂಟಿಟಿಗಳನ್ನು ಉಪಯೋಗಿಸಿ ಸಮಾಜದ ಎಲ್ಲ ಸ್ತರಗಳಲ್ಲೂ ಭ್ರಷ್ಟಾಚಾರ ನಡೆಸುವವರಿಗೆ ಇದು ದೊಡ್ಡ ಕಡಿವಾಣ.
  • ಇಲ್ಲಿಯವರೆಗೂ ಅತ್ಯುತ್ತಮ ಪರಿಕಲ್ಪನೆಗಳೆಲ್ಲ ಯೋಜನೆಯ ಹಂತದಲ್ಲೆ ಅದ್ಭುತವಾಗಿ ಪ್ರತಿಪಾದಿಸಲ್ಪಟ್ಟು ಕಾರ್ಯರೂಪಕ್ಕೆ ತರುವಾಗ ಮಹೋದ್ಭುತವಾಗಿ ಎಕ್ಕುಟ್ಟಿ ಹೋಗಿರುವ ನಮ್ಮ ದೇಶದ ಇತರ ಎಲ್ಲ ಕಾರ್ಯಕ್ರಮಗಳ ಸಾಲಿನಲ್ಲಿ ಸೇರಲು ಈಗ ಆಧಾರ್‍ ತುದಿಗಾಲಲ್ಲಿ ನಿಂತ ಹಾಗಿದೆ.

ಯಾಕೆಂದರೆ ಮೇಲೆ ವಿವರಿಸಿದ ಹಾಗೆ ಆಧಾರ್ ಅನ್ನು ಸರಿಯಾಗಿ ಕಾರ್ಯಗತ ಮಾಡಿ ಜನರಲ್ಲಿ ನಾಗರಿಕರಲ್ಲಿ ಇದರ ಬಳಕೆಯ ಬಗ್ಗೆ ಸರಿಯಾದ ತಿಳುವಳಿಕೆ ಕೊಟ್ಟರೆ ಭಾರತದ ಆಡಳಿತ ಮತ್ತು ಕಾರ್ಯಾಂಗ ಸುಧಾರಿಸಿಹೋಗುತ್ತದೆ. ಇದೊಂತರ ಹುಚ್ಚು ಬಿಡದೆ ಮದುವೆಯಾಗದು - ಮದುವೆಯಾಗದೆ ಹುಚ್ಚು ಬಿಡದು ಎಂಬ ಕ್ಯಾಚ್ ೨೨ ಸನ್ನಿವೇಶವಾಗಿ ಪರಿವರ್ತನೆಯಾಗಿ ಕೂತಿದೆ. ಇದಕ್ಕೆ ನಮ್ಮ ರಾಜಕೀಯ ಪಕ್ಷಗಳ ಮೇಲಾಟ ಕಾರಣ. ಅಷ್ಟೆ ಅಲ್ಲದೆ ಭ್ರಷ್ಟತನದಲ್ಲಿ ಮುಳುಗಿಹೋಗಿರುವ ಆಡಳಿತ ಯಂತ್ರಮತ್ತು ಏನಾದರೆ ಏನು ನಮಗೇನಾಗುತ್ತದೆ ಎಂಬ ನಾವು ನಾಗರಿಕರ ನಿರ್ಲಕ್ಷ್ಯ ಕಾರಣ. ಭ್ರಷ್ಟತನವನ್ನು ನಾವು ರಾಜಕೀಯ ಪಕ್ಷಗಳಿಗೆಆಡಳಿತ ಯಂತ್ರಕ್ಕೆ ಆರೋಪಿಸಿ ನಮ್ಮ ಮೇಲಿನ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವುದು ಎಲ್ಲಕ್ಕಿಂತ ಮುಖ್ಯ ಕಾರಣ.

·       ಆಧಾರ್ ಅನ್ನು ಸಮರ್ಥಿಸುವ ಗುಂಪು ಹೇಳುತ್ತದೆ. ಆಧಾರ್ ಎಂದರೆ ಎಲ್ಲದೂ. ನಮ್ಮ ಎಲ್ಲ ಸಮಸ್ಯೆಗಳಿಗೆ ಆಧಾರೆ ಪರಿಹಾರ. ಇದನ್ನು ಮಾಡಿದರೆ ಭಾರತ ವಿಶ್ವಗುರುವಾಗುತ್ತದೆ ಎಂದು.
·       ಆಧಾರ್‍ ಅನ್ನು ವಿರೋಧಿಸುವ ಗುಂಪು ಹೇಳುತ್ತದೆ ಆಧಾರೆ ಎಂದರೆ ಎಲ್ಲದೂ ಅಲ್ಲ. ನಮ್ಮ ಎಲ್ಲ ಸಮಸ್ಯೆಗಳಿಗೆ ಆಧಾರೆ ಕಾರಣ. ಇದನ್ನು ಮಾಡಿದರೆ ಭಾರತ ವಿಶ್ವಗುಲಾಮನಾಗುತ್ತದೆ. ಆಧಾರ್‍ ಹೊಂದಿದ ವ್ಯಕ್ತಿ ಆಡಳಿತದ ಸರ್ಕಾರದ ಮರ್ಜಿಯಲ್ಲಿ ಬದುಕಬೇಕಾಗುತ್ತದೆ. ಖಾಸಗಿತನದ ಹರಣ ಎಂದು.
ಈ ಎರಡೂ ಗುಂಪಿನ ಮಧ್ಯದ ತೆಳುಗೆರೆಯ ಮೇಲೆ ಒಂಟಿಕಾಲಿನಲ್ಲಿ ನಿಂತಿದೆ ಆಧಾರ್‍ ಅಥವಾ ಯೂನಿಕ್ ಐಡೆಂಟಿಫಿಕೇಶನ್ ಎಂಬ ಪರಿಕಲ್ಪನೆಯ ಸತ್ಯ.

ಒಂದು ಗುರುತಿನ ಚೀಟಿ ನಮ್ಮ ಎಲ್ಲ ದೈನಂದಿನ ವ್ಯವಹಾರದನಂಬಿಕೆಯದಾಖಲೆಯನಕಲು ಮಾಡಲಾಗದ ಸತ್ಯವಾದರೆ ಅದರಿಂದ ಅನುಕೂಲ ಯಾರಿಗೆ?
ಜನಸಾಮಾನ್ಯರಿಗೆ. ಇದನ್ನು ಯಾವುದೇ ವಶೀಲಿ ಬಾಜಿದುಡ್ಡು ದಮ್ಮಯ್ಯ ಕೊಟ್ಟು ಮಾಡಲಾಗುವುದಿಲ್ಲ. ನಮ್ಮದೇ ಹೆಬ್ಬೆಟ್ಟುನಮ್ಮದೇ ಕಣ್ಗುಡ್ಡೆ,ಮತ್ತು ನಾವೆ ಕೊಡುವ ನಮ್ಮ ವಿವರಗಳು. ಎಲ್ಲಿಯೂ ಯಾವಾಗಲೂ ಉಪಯೋಗಿಸಬಹುದಾದ ಪರಿಶೀಲಿಸಬಹುದಾದ ವಿವರ ವ್ಯವಸ್ಥೆ. ಇಲ್ಲಿ ನಮ್ಮ ವಿವರಗಳನ್ನು ಯಾರೆಂದರೆ ಅವರಿಗೆ ಕೊಡಲಾಗುವುದಿಲ್ಲ. ನಮ್ಮ ಕಾರ್ಡು ಅಥವಾ ನಂಬರ್ ಯಾರೆ ಕದ್ದರೂ ಅದನ್ನು ನಮ್ಮದೆ ಬಯೋಮೆಟ್ರಿಕ್ ಪರಿಶೀಲನೆಯಿಲ್ಲದೆ ಉಪಯೋಗಿಸಲೇ ಬರುವುದಿಲ್ಲ. ಇದು ಪಕ್ಷಾತೀತವಾದ ಸತ್ಯ.

ಒಂದು ನಕಲು ಮಾಡಲಾಗದ ಗುರುತಿನ ಚೀಟಿಯಿಂದ ಅನಾನುಕೂಲ ಯಾರಿಗೆ?
ನಮ್ಮನ್ನು ನಂಬಿಸಿ ನಮ್ಮನ್ನು ಕೊಳ್ಳೆ ಹೊಡೆಯುತ್ತಿರುವ ಭ್ರಷ್ಟ ವ್ಯವಸ್ಥೆಗೆ. ಅದು ದುಡ್ಡು ಕೊಟ್ಟು ಮತ ಖರೀದಿಸಿ ಬಂದಿರುವ ಸರ್ಕಾರವಿರಬಹುದುತೋಳ್ಬಲ ಉಪಯೋಗಿಸಿ ಹೆದರಿಸಿ ನಮ್ಮನ್ನು ಅದುಮಿಟ್ಟಿರುವ ಪಾಳೇಗಾರ ವ್ಯವಸ್ಥೆಯಿರಬಹುದುತಲೆ ಉಪಯೋಗಿಸಿ ನಮ್ಮ ತಲೆ ಕೆಡಿಸಿ ಅನೈತಿಕ ದುಡ್ಡು ಸಂಪಾದನೆಗೆ ನಮ್ಮನ್ನು ಪ್ರಚೋದಿಸುವ ಗುಂಪಿರಬಹುದುನಮ್ಮ ವಿವರಗಳನ್ನೇ ಉಪಯೋಗಿಸಿ ನಕಲು ಮಾಡಿ ತಮ್ಮ ಕಾರ್ಯ ಸಾಧಿಸುವ ಭಯೋತ್ಪಾದಕರುಭ್ರಷ್ಟ ರಾಜಕಾರಣಿಗಳುಕಂಪನಿಗಳಿರಬಹುದು ಇವರೆಲ್ಲರಿಗೂ ಕೈಕಟ್ಟುತ್ತದೆ. ಆದರೆ ಹಾಗಂತ ಇದನ್ನು ಸಾರಾಸಗಟಾಗಿ ಎದುರಾಎದುರೆ ಹೇಳಲು ಯಾರಿಗೂ ದಮ್ಮಿಲ್ಲ. ಈ ಯೋಜನೆಯ ಅನುಷ್ಠಾನದಲ್ಲಿರುವ ಲೋಪದೋಷಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಇವರೆಲ್ಲರೂ ನಮಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇದ್ದಾರೆ. ನಮ್ಮನ್ನು ನಮ್ಮ ವಿರುದ್ಧವೇ ಎತ್ತಿಕಟ್ಟುತ್ತಾರೆ. ಇದು ಸಹ ಪಕ್ಷಾತೀತವಾದ ಸತ್ಯ. ನಾನು ಹೊಡೆದಂಗೆ ಮಾಡುವೆ ನೀನು ಅತ್ತಂತೆ ಮಾಡು ಎನ್ನುವುದು ಈ ಭ್ರಷ್ಟ ವ್ಯವಸ್ಥೆಯ ಪಾಲುದಾರರಾದ ಎಲ್ಲರ ಕಾರ್ಯತಂತ್ರ.
ಇದರ ಯಾವುದೇ ಮಾಹಿತಿಯಿಲ್ಲದ ನಮ್ಮ ಜನಸಾಮಾನ್ಯರ ದೊಡ್ಡ ಗುಂಪಿದೆ. ನಮಗೆ ನಮ್ಮದೇ ಗಾಣದಲ್ಲಿ ದಿನದಿನವೂ ತಿರುಗುತ್ತಿರುವವರಿಗೆ ಇದೆಲ್ಲ ಬಸ್ಸಲ್ಲಿ ಹೋಗಲು ಟಿಕೆಟ್ ಕೊಂಡಹಾಗೆ ಅಥವಾ ಊಟಕ್ಕೆ ಮೊದಲು ಕೂಪನ್ ಕೊಂಡ ಹಾಗೆ ಇದೂ ಒಂದು ವ್ಯವಸ್ಥೆ. ಇದರ ಹೆಚ್ಚಿನ ತಿಳುವಳಿಕೆಯಿಲ್ಲ. ಭ್ರಷ್ಟರಲ್ಲದ ಆದರೆ ಆಡಳಿತ ಯಂತ್ರದ ಭಾಗವಾಗಿರುವ ಹೆಚ್ಚಿನ ಸರ್ಕಾರಿ ಸಿಬ್ಬಂದಿಗಳೂ ಹೀಗೆಯೇ ಇರುವರು. ಅವರಿಗೂ ಈ ಯೋಜನೆಯ ಸಂಪೂರ್ಣ ತಿಳುವಳಿಕೆಈ ಯೋಜನೆಯ ಫಲದಾಯಿತ್ವದ ಅರಿವು ಇಲ್ಲ. ಎಲ್ಲರಿಗೂ ಯಾವುದೋ ದುಡ್ಡುತಗೊಂಡ ಖಾಸಗೀ ಫರ್ಮು ತರಬೇತಿ ಕೊಡುತ್ತದೆ. ಅವರು ಉಪಯೋಗಿಸುವ ಭಾಷೆಸ್ಥಳೀಯ ಜ್ಞಾನ ಎಲ್ಲ ನಗಣ್ಯ. ತರಬೇತಿ ಮುಗಿದ ಸರ್ಟಿಫಿಕೇಟು ಕೊಡುತ್ತದೆ. ಆದರೆ ನಿಜವಾಗಿಯೂ ಈ ಆಧಾರ್‍ ಕೊಡುವಮತ್ತು ಕೊಟ್ಟ ನಂತರ ಅದನ್ನು ಉಪಯೋಗಿಸಲು ಬೇಕಾಗುವ ಮೂಲಭೂತ ವ್ಯವಸ್ಥಯೇ ಇಲ್ಲ. ಆ ವ್ಯವಸ್ಥೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಬೇಕಾದ ಉಪಯುಕ್ತ ಅಥವಾ ನೇರ ಹ್ಯಾಂಡ್ಸ್-ಆನ್ ತರಬೇತಿ ಇಲ್ಲ. ಈ ಡಿಜಿಟಲ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಬೇಕಾದ ವಿದ್ಯುತ್ಯು.ಪಿ.ಎಸ್ನೆಟ್ವರ್ಕ್/ಅಂತರ್ಜಾಲಉತ್ತಮ ಮಾಹಿತಿಸರ್ವರ್ ಯಂತ್ರಗಳುಹೆಬ್ಬೆಟ್ಟು,ಫೋಟೋಐರಿಸ್ ದಾಖಲಿಸುವ ಯಂತ್ರಗಳು ಇವುಗಳನ್ನೆಲ್ಲ ಸರಿಯಾಗಿ ಪೂರೈಸುವ ವ್ಯವಸ್ಥೆಯಿಲ್ಲ. ಹಾಗಾಗಿ ಆಧಾರ್‍ ದಾಖಲೆ ಜನರಿಗೆ ಒಂದು ವ್ಯರ್ಥ ಪ್ರಹಸನದ ಹಾಗೆಸಮಯ ಪೋಲು ಮಾಡುವ ಯೋಜನೆಯ ಹಾಗೆ ಕಾಣುತ್ತದೆ. ಆಧಾರ ಬಂದ ನಂತರ ಅದನ್ನು ಉಪಯೋಗಿಸುವ ಕಡೆ ಇರುವ ಅವ್ಯವಸ್ಥೆಅಜ್ಞಾನ ಕೂಡಾ ಇದರ ಕಾರ್ಯಕ್ಷಮತೆಗೆ ದೊಡ್ಡ ಹೊಡೆತ.

ಇಷ್ಟಲ್ಲದೆ ಇದು ದೇಶದ ಭದ್ರತೆಗೆಖಾಸಗಿತನಕ್ಕೆ ಹೊಡೆತ ನೀಡುತ್ತದೆ ಎಂದು ಪ್ರಚಾರಮಾಡುವ ಒಂದು ಗುಂಪಿದೆ. ಇವರು ಯಾತಕ್ಕೆ ಸೇರಿದವರು ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ. ಈ ಮಾಹಿತಿ ಅತ್ಯಂತ ಗೌಪ್ಯ ಮತ್ತು ಸುರಕ್ಷಿತ. ಆದರೆ ಈ ಗೌಪ್ಯತೆ ಮತ್ತು ಸುರಕ್ಷಿತತೆಯ ಬಗ್ಗೆ ಮಾತಾಡಬೇಕಾಗಿರುವುದು ನಾನು ನೀವಲ್ಲ. ಇದನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಸಾಮರ್ಥ್ಯವಿರುವ ಆಧಾರ್ ಪ್ರಾಧಿಕಾರ. ಪ್ರಾಧಿಕಾರದಿಂದ ಜನರಿಗೆ ಈ ಬಗ್ಗೆ ಸರಿಯಾದಜನರ ತಿಳುವಳಿಕೆಯ ಮಟ್ಟದಲ್ಲಿ ಅರ್ಥವಾಗಬಹುದಾದ ಸ್ಪಷ್ಟೀಕರಣ ಮತ್ತು ಮಾಹಿತಿ ಬೇಕು. ಇದನ್ನು ತನ್ನ ಅನುಕೂಲಕ್ಕೆ ಮಾತ್ರ ಬಳಸಿಕೊಳ್ಳುವಬದ್ಧತೆಯಿಲ್ಲದಿರುವ ಸರ್ಕಾರಗಳೂ ರೂಲುಗಳ ಪ್ರಕಾರ ಒಂದಿಷ್ಟು ಅನುದಾನ ಉಪಯೋಗಿಸಿ ಕಾಟಾಚಾರದ ಜಾಹೀರಾತುಗಳನ್ನು ರಚಿಸಿ ಯಾರಿಗೂ ಅರ್ಥವಾಗದ ಹಾಗೆ ಮಾಡುವುದರಲ್ಲಿ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿವೆ.

ಆಧಾರ ಒಂದು ಅತ್ಯುತ್ತುಮ ಪರಿಕಲ್ಪನೆ. ಭಾರತದಂತಹ ದೇಶಕ್ಕೆ ಇದು ಅವಶ್ಯವಾಗಿ ಬೇಕು. ಆದರೆ ಆಧಾರ್‍ ನೀಡುವ ಮತ್ತು ನೀಡಿದ ನಂತರ ಆ ಮಾಹಿತಿಯನ್ನು ಸರಿಯಾಗಿ ಸಂರಕ್ಷಿಸುವಸಂರಕ್ಷಿಸಿದ ಮಾಹಿತಿಯನ್ನು ಸರಿಯಾಗಿ ನಿರ್ವಹಿಸುವ ವ್ಯವಸ್ಥೆಯನ್ನು ನಮ್ಮ ಸರ್ಕಾರಆಡಳಿತ ಯಂತ್ರ ಇವು ಸಮರ್ಪಕವಾಗಿ ಮಾಡಬೇಕು. ಇದರ ಬಗ್ಗೆ ತಿಳುವಳಿಕೆಯನ್ನು ಪಡೆದ ನಾಗರಿಕರು ಇತರರಿಗೂ ತಿಳುವಳಿಕೆಯನ್ನು ಹಂಚಬೇಕು. ಮತ್ತು ನಮ್ಮ ಅನುಕೂಲಗಳನ್ನು ನಾವು ಪಡೆಯುವ ನಿಟ್ಟಿನಲ್ಲಿ ಸರ್ಕಾರವನ್ನು ಆಡಳಿತವನ್ನು ಪ್ರಶ್ನಿಸಿ ಅದನ್ನು ನಮಗೆ ನೀಡುವಂತೆ ಮಾಡಬೇಕು. ಏನೋ ಹೋಗಲಿ ಬಿಡು. ನಾನೊಬ್ಬನು ಗೆರೆದಾಟಿದರೆ ಏನು ಮಹಾ ಆಯಿತು ಎಂಬ ಉಡಾಫೆಯಲ್ಲಿ ನಮ್ಮ ನೈತಿಕ ಬದ್ಧತೆಯನ್ನು ಹೊಂದಿಸಿಕೊಂಡು ನಡೆಯುವ ನಾವು ಕೋಟ್ಯಂತರ ಭಾರತೀಯರು ಇಡೀ ದೇಶವನ್ನೆ ಭ್ರಷ್ಟಾಚಾರಕ್ಕೆ ಒತ್ತೆ ಇಡುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನ ಬಂದರೆ ಇದು ಸರಿಹೋಗಲೂಬಹುದು.
ಆಗ ಮಾತ್ರ ಸಾವಿರಾರು ಲಕ್ಷ್ಮಮ್ಮರು ತಮ್ಮ ಪಡಿತರವನ್ನು ಯಾವ ಅಡೆತಡೆಯಿಲ್ಲದೆ ಪಡೆಯಬಹುದು. ನೂರಾರು ಮಾದೇವಯ್ಯರಿಗೆ ಅವರ ವಿಮೆ ದೊರಕುತ್ತದೆ. ಶಾಮರಾಯರು ಅಬಾಧಿತವಾಗಿ ಮೊಬೈಲು ಉಪಯೋಗಿಸಬಹುದು. ಆಧಾರಿನಿಂದ ಪಡಿತರವಿಲ್ಲದೆ ಸತ್ತರು ಎಂಬ ಸುದ್ದಿಯು ನಿರಾಧಾರವಾಗುತ್ತದೆ. ಕಪ್ಪುಹಣ ಲೂಟಿ ಮಾಡಿ ಬೇರೆ ದೇಶಕ್ಕೆ ಓಡಿಹೋಗುವವರಿಗೆ ಅಡ್ಡಗಾಲು ಹಾಕಬಹುದು. ಒಂದು ಮಟ್ಟಕ್ಕೆ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಕೂಡ.

ಸಂಜೆ - ಒಂದ್ಕಥೆ, ಮತ್ತೊಂದ್ಕಥೆ, ಮತ್ತು ಕವಿತೆ...

ಡಿಸೆಂಬರ್ ತಿಂಗಳ ಮಯೂರದಲ್ಲಿ ಎರಡು ಕಥೆ ಓದಿದೆ.
ಒಂದು ಶ್ರೀ ರಾಜು ಹೆಗಡೆಯವರ ಕಥೆ - ತಳಿಯ ನೆರಳು
ಇನ್ನೊಂದು ಶ್ರೀಮತಿ ಶುಭಾ ಎ.ಆರ್‍. ಅವರ ಕಥೆ - ಚೂರು ಭೂಮಿ, ತುಣುಕು ಆಕಾಶ.
ಎರಡೂ ನನ್ನನ್ನು ತುಂಬ ಕಲಕಿದ ಕಥೆಗಳು. ತಳಿಯ ನೆರಳು ಕಥೆಯಲ್ಲಿ ಒಂದು ಜೊತೆ ಅಪ್ಪ-ಮಗ ಇದ್ದಾರೆ. ಚೂರು ಭೂಮಿ ತುಣುಕು ಆಕಾಶ ಕಥೆಯಲ್ಲಿ ಒಂದು ಜೊತೆ ಅಪ್ಪ-ಮಗ ಇದ್ದಾರೆ.
ಎರಡೂ ಕಥೆಗಳಲ್ಲಿ ಆವರಿಸುವ ಹಿರಿತನ, ಕೈಕೊಡವುವ ಮಗುತನ, ಹೊಸ ತುಡಿತ, ಅದೇ ಹಳೆ ದುಡಿತ, ಜಾರುದಾರಿ...ಏರುದಾರಿ ಎಲ್ಲ ಬೇರೆ ಬೇರೆ ಸ್ತರಗಳಲ್ಲಿ ಚಿತ್ರಿತವಾಗಿವೆ. 
ರಾಜು ಹೆಗಡೆಯವರ ಕಥೆಯ ಅಪ್ಪಮಗ - ಚಿಕ್ಕ ಊರಿನ ಅಥವಾ ದೊಡ್ಡ ಹಳ್ಳಿಯ ಸ್ವಲ್ಪ ಹಳೆ ಕಾಲದ ಅಪ್ಪ ಮತ್ತು ಈ ಕಾಲದ ಮಗ ಗೆಟಪ್ಪಿನವರು. ಅಲ್ಲಿನ ಹಳಹಳಿಕೆ, ಸಾಧ್ಯತೆ, ಅರಾಜಕತೆ, ಕುಸುಬಿಷ್ಟಿ ಎಲ್ಲವನ್ನೂ ಕಥೆ ತುಂಬ ಚೆನ್ನಾಗಿ ಮನಸ್ಸಿಗೆ ಹೊಗಿಸುತ್ತದೆ.
ಹಿಡಿದಿಟ್ಟುಕೊಳ್ಳುವಿಕೆ. ಜಬರ್ದಸ್ತು.ಅಸಹಾಯಕತೆ, ನೋಡಿದ್ಯಾ ನನ್ ಕಾಲ ಬಂತು ಎಂಬ ಭಾವ, ಮತ್ತು ಬಿಟ್ಟುಕೊಡುವಿಕೆ ಇದನ್ನ ಹೆಗಡೆಯವರು ತುಂಬ ಸಂಯಮದಿಂದಲೂ ಆದರೆ ಅಷ್ಟೆ ಪ್ರೀತಿಯಿಂದಲೂ ನೇಯ್ದಿದ್ದಾರೆ. ಜಬರಿಸಿಕೊಳ್ಳುವುದಕ್ಕೆ ಅಭ್ಯಾಸವಾಗಿದ್ದ ಮನಸ್ಥಿತಿಯ ಹೊಸ ತಲೆಮಾರು ತಾನೆ ಸವಾರಿ ಮಾಡುವ ಸಮಯದಲ್ಲಿ ಹೇಗೆ ತಡಬಡಾಯಿಸುತ್ತದೆ... ಸಹಜವಾಗಿ ತನ್ನದಾದ ಯಜಮಾನಿಕೆಯಲ್ಲಿಯೂ ಯಾಕೆ ಗಿಲ್ಟಿನಲ್ಲಿ ನರಳುತ್ತದೆ ಎನ್ನುವುದು ಬಹುಶಃ ತಲೆಮಾರುಗಳ ತಳಮಳ. ಇದು ಚೆನ್ನಾಗಿ ವ್ಯಕ್ತವಾಗಿದೆ.
ಶುಭಾ ಅವರ ಕಥೆಯ ಅಪ್ಪ-ಮಗ ಮಹಾನಗರದ ಚಟ್-ಪಟ್ ನೆಟ್ ಜನಜೀವನದವರು. ಹೊಸ ತುಡಿತಕ್ಕೆ ಇಷ್ಟಿಷ್ಟೇ ಬಿಟ್ಟುಕೊಡುತ್ತ ಅಭ್ಯಾಸ ಮಾಡಿಕೊಳ್ಳುವ ಹಿರಿತಲೆಗಳು, ಒಳಗೊಳಗೆ ಬಿಟ್ಟುಕೊಟ್ಟ ನವೆತ, ಬಿಟ್ಟುಕೊಡುವುದನ್ನೇ ಬಯಸಿದ್ದರೂ... ಹಗ್ಗವಿಲ್ಲದೆಯೂ ಕಂಬಕ್ಕೆ ಕಟ್ಟಿದ ಹಾಗೆಯೇ ಓಡಿಯಾಡುವ ಕಿರಿತಲೆಗಳು, ಚಿಮ್ಮುನೆಗೆತದ ಬದುಕಿನಲ್ಲಿ ಚಿಮ್ಮುಹಲಗೆಯನ್ನ ಒದೆಯಲೇಬೇಕಾದ ಅನಿವಾರ್ಯತೆಯ ಗಿಲ್ಟಿನಲ್ಲಿ ನರಳುವ ಅದೇ ತಲೆಮಾರುಗಳ ತಳಮಳ....ಇಲ್ಲಿದೆ. ಪುಟ್ಟ ವಿವರಗಳು ದಟ್ಟ ಚಿತ್ರಣ.
ಈ ಎರಡೂ ಕಥೆಗಳಲ್ಲಿ ವಿವರಗಳ ಕಟ್ಟೋಣಕ್ಕೆ ಮಗನ ಮತ್ತು ಅಮ್ಮನ ನೆರವಿದೆ. ಅಮ್ಮನ ಮಾತು, ಬದುಕು, ನಡವಳಿಕೆಗಳಲ್ಲಿ ಅಪ್ಪನ ಹಲಮುಖಗಳ ಅನಾವರಣ ಶುಭ ಕಥೆಯಲ್ಲಿ ಚೂರು ಜಾಸ್ತಿ ಇದೆ.
ಹಾಗಾದರೆ ಒಂದು ಹದಾ ಟ್ರಾನ್ಸಿಷನ್ ಮಕ್ಕಳ ಮತ್ತು ಅವರ ತಂದೆ ತಾಯಿಯರ ನಡುವೆ ಸಾಧ್ಯವೆ ಇಲ್ಲವೆ. ಇವರು ಅಥವಾ ಅವರು ಹಳಹಳಿಸುತ್ತಲೆ ಇರಬೇಕೆ ಅಂತ ತುಂಬ ಯೋಚನೆಯಾಗಿದೆ. ಯಾಕೆಂದರೆ ಇವರ ಕಥೆಗಳಲ್ಲಿ ಬರಿಯ ನಾಲ್ಕು ಪುಟಗಳಿಲ್ಲ. ನಮ್ಮ ಸುತ್ತ ಸಂಭವಿಸುತ್ತಿರುವ ಬದುಕಿದೆ. ಅದೇ ರೂಪಾಂತರದ ಪರಿವರ್ತನೆಯ ನೋವು ಎಳೆ ಬಿಚ್ಚಿಕೊಳ್ಳುತ್ತಿದೆ.
ನಾನು ಕಥೆ ಹೇಳುವುದಿಲ್ಲ. ನೀವು ಓದಿ. ಡಿಸೆಂಬರ್ ತಿಂಗಳ ಮಯೂರದಲ್ಲಿ. Raju Hegde ರಾಜು ಹೆಗಡೆ ಮತ್ತು Shubha A R Nadig ಶುಭಾ, ಅವರೇನಾದರೂ ಕಥೆಯ ಟೆಕ್ಸ್ಟ್ ಇದ್ದು ಶೇರ್ ಮಾಡಿದರೆ ಜಾಸ್ತಿ ಜನ ಓದಬಹುದೇನೋ.
ಹಾಗೆಯೇ ಸುಬ್ರಾಯ ಚೊಕ್ಕಾಡಿಯವರ ಕವಿತೆಗಳ ಬನದಲ್ಲಿ ಸುತ್ತುತ್ತಿದ್ದೇನೆ. ಅಲ್ಲೊಂದು ಕವಿತೆ ಬದುಕಿನಲ್ಲಿ ಆಗದೆ ಇರುವುದನ್ನು ಹೀಗಿದ್ದರೆ ಎಷ್ಟು ಚೆನ್ನ ಎಂದು ಹೇಳುವಂತೆ ಸಂಜೆಬೆಳಕಿನಲ್ಲಿ ಹೊಳೆಯುತ್ತಿದೆ. ಇದನ್ನು ಓದುತ್ತಾ... ಸಂಜೆಬೆಳಕಿನಲ್ಲಿ ಇನ್ನೇನು ನೆಲಕ್ಕೊರಗಲಿರುವ ಮರದಂತೆ ಕಾಯುತ್ತಿರುವೆ ಎಂದು ಹೇಳುತ್ತಿದ್ದ ಪೆಜತ್ತಾಯ ಅಂಕಲ್ ನೆನಪಾಗುತ್ತಿದೆ.
ಸಂಜೆ
by ಸುಬ್ರಾಯ ಚೊಕ್ಕಾಡಿ
------------------------------------
ಬಿಸಿಲ ಝಳಕ್ಕೆ ದಣಿದ ಮರ
ಗಾಳಿ ಬೀಸಿಕೊಳ್ಳುತ್ತಿದೆ
ಎಲೆಗಳನ್ನಲುಗಿಸಿ
ಹಣ್ಣಾದ ಎಲೆ
ಸಣ್ಣಗೆ ಸದ್ದು ಮಾಡುತ್ತಾ
ಅವಕಾಶದಲಿ ತೇಲುತ್ತಾ
ಸರಿಯುತ್ತಿದೆ ನೆಲದ ಕಡೆಗೆ
ಬೇಗುದಿಯ ಮರೆಸಿ
ಹೂಮುತ್ತನೊತ್ತಲು.
ಹಕ್ಕಿಗಳ ಗಂಭೀರ ಚರ್ಚೆ
ನಡೆದೇ ಇದೆ
ನಾಳೆಗಳ ಹೆಕ್ಕಲು
ಇಳಿಯುತ್ತಿದ್ದಾನೆ ಸೂರ್ಯ
ಬೆಟ್ಟದ ಮರೆಗೆ
ಮಲಗಿರುವ ಕೊಳದ ಕಡೆಗೆ
ಪರಿತಾಪ ಕಳೆಯಲು
ತೆರೆದೇ ಉಳಿದ
ನಿಷ್ಪಂದ ನೆಲದಲ್ಲೀಗ
ಲಘು ಕಂಪನ-
ತಳದ ನೀರಲ್ಲಿ
ಕಿರುತೆರೆಗಳುಂಗುರ ಸೃಷ್ಟಿ
ಇದೀಗ ಬೆಳದಿಂಗಳಿಗೆ ಆಹ್ವಾನ
ಮೌನದ ಕುಂಭ ಹೊತ್ತು
ಕಾಯುತ್ತಿದೆ ಗೋಧೂಳಿ ಲೋಕ.




Tuesday, November 21, 2017

ತೀರ್ಥ

ಶಂಖದಿಂದ ಬಂದಿದ್ದು ಮಾತ್ರ ತೀರ್ಥ
ಅಂತೊಬ್ಬರು ಹೇಳಿದರು
ಹಲವರು ಕೇಳಿದರು
ನುಡಿತೀರ್ಥ ಹನಿಸುವ
ಶಂಖಗೊರಳು ಪವಿತ್ರವಾಗಿದ್ದೇ
ಕೇಳುವ ಕಿವಿಯಿಂದಲ್ಲವೆ
ಅಂತ ಈ ಕಾಲದ ಮಕ್ಕಳು
ಕೇಳಿದರೆ
ಪುರೋಹಿತರಿಗೆ ಸಿಟ್ಟು
ಶಂಖ ಊದಲು ಶ್ವಾಸ ಸಾಲುವುದಿಲ್ಲ
ಅರ್ಚನೆಗೆ ನಮಸ್ಕರಿಸಿದ ತಲೆ ಬದಿಯ
ಕಿವಿಯಲ್ಲಿ ಇಯರ್ಫೋನುಗಳು...ವಯರು ಕಾಣುವುದಿಲ್ಲ
ಶಂಖಕ್ಕೆ ಮೂರು ನಾಮದ ಗಂಧ
ಥಳಥಳಿಪ ಹಿತ್ತಾಳೆ ತಟ್ಟೆ
ಗುಡಿಯ ಮಾಡದ ಮೇಲೆ
ಕಟ್ಟಿದ ಗೂಡಿನಲ್ಲಿ
ಕಾವು ಪಡೆವ ಮೊಟ್ಟೆ
ಬೆಳಗಾತ ಹೂಚೆಲ್ಲಿದ ಪಾದಪಥ
ಊರುಗೋಲಿನ ದಶರಥ-
ರ ಸಾಲು
ಇರುವೆ ಹರಿದಂತೆ ವಾಹನ-
ಕಟ್ಟಿಕೊಳ್ಳುವ ರಾಜಪಥ
ಸೈರನ್ನೇ ಕೇಳುವುದಿಲ್ಲ
ಶಂಖದ್ದಿನ್ನೇನು
ಕೋಳಿ ಯಾವಯಾವಾಗಲೋ ಕೂಗುತ್ತದೆ
ಸೂರ್ಯ ಬಂದಿದ್ದು ಗೊತ್ತಾಗದ ಹೊಂಜು
ಹಕ್ಕಿ ಮಾತ್ರ ಬೆಳಕು ಹರಿವ ಚಣದಲ್ಲಿ
ಹಾರುತ್ತದೆ
ಇಲ್ಲದಿದ್ದರೆ ತುಂಬಲಾರದು ಹೊಟ್ಟೆ
ಕಾವಿಲ್ಲದೆ
ಒಡೆಯಲಾರದು ಮೊಟ್ಟೆ
ಮುರಿದರಷ್ಟೆ ಭಗ್ನ
ವೆನ್ನಲಾಗದು
ಒಡೆಯದ ಮೊಟ್ಟೆಯ ಬದುಕೂ ಭಗ್ನ

ಶಂಖ ಸುಮ್ಮನಿದೆ
ಶ್ವಾಸ ಕುಂದಿರಬಹುದು
ಹಕ್ಕಿ ಹಾರದಿದೆ
ಪುಕ್ಕ ತರಿದಿರಬಹುದು
ಕಿವಿ ಎಂಗೇಜಾಗಿಯೇ ಇದೆ
ಆ ರತಿಯ ಶಾಖವೇ ವರ್ಚುವಲ್ ಆಗಿರುವಾಗ
ತೀರ್ಥಕ್ಕೇನು ಕಡಿಮೆ-
ನುಡಿತೀರ್ಥಕ್ಕೂ ವರ್ಬಲ್ ಡಯೇರಿಯಾಕ್ಕೂ
ಇದ್ದೂ ಇರದ ಹಾಗಿನ ತೆಳ್ಳನೆ ಗೆರೆಯೆಳೆಯುವ
ಜಾಲದಂಗಳದಲ್ಲಿ-
ತೊಟ್ಟಿಕ್ಕುತ್ತಿದೆ ಶಂಖವಿಲ್ಲದೆ...

Saturday, November 4, 2017

ಪರ್ವತದಲ್ಲಿ ಪವಾಡ - ಸಂಯುಕ್ತಾ ಪುಲಿಗಲ್

ಇಂಗ್ಲಿಷ್ ಮೂಲದ ಉರುಗ್ವೆ ಲೇಖಕನ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್, ನ ಕನ್ನಡ ಅನುವಾದವನ್ನು ಗೆಳತಿ ಸಂಯುಕ್ತ ಪುಲಿಗಲ್ ಮಾಡಿದ್ದಾರೆ. ಪ್ರಪಂಚಕ್ಕೆಲ್ಲ ಹರಡಿರುವ ವಿಸ್ತಾರವಾದ ನೀಲಿ ಆಕಾಶವು, ಇಲ್ಲಿ ದೊಡ್ದ ಊರಿನ ಹಾದಿಗಳ ಬದಿಯಲ್ಲಿನ ಪುಟ್ಟ ಜಾಗದಲ್ಲಿ ನಿಂತ ಚಿಕ್ಕ ಹುಡುಗಿಯ ಪುಟಾಣಿ ಕಣ್ಣುಗಳಲ್ಲಿ ತುಂಬಿಕೊಳ್ಳುವ ಸಹಜ ಬೆರಗನ್ನು ನಾನು ಈ ಪುಸ್ತಕದ ಅನುವಾದ ಓದುವಾಗ ಅನುಭವಿಸಿದೆ. ವಿಸ್ತಾರ ಎಷ್ಟು ಇರಬಹುದು. ಹಿಡಿದಿಡಬಲ್ಲೆ ಎಂಬ ಆತ್ಮವಿಶ್ವಾಸ ಬೇಕು. ಒಂದೊಂದು ಇಂಚಿನಷ್ಟೆ ಇರಬಹುದಾದ ಭೌತಿಕ ಕಣ್ಣು ವಿಸ್ತಾರವನ್ನು ತುಂಬಿಕೊಳ್ಳುತ್ತ ತನ್ನನ್ನೇ ತಾನು ವಿಸ್ತರಿಸಿಕೊಳ್ಳುತ್ತದೆ. ಅದನ್ನು ಸಂಯುಕ್ತ ಸಾಧ್ಯವಾಗಿಸಿದ್ದಾರೆ.
" ಆಂಡೀಸ್ ಪರ್ವತದ ಎತ್ತರದ ಹಿಮಬಂಡೆಗಳ ನಡುವೆಯೆಲ್ಲೋ ತಪ್ಪಿಸಿಕೊಂಡಿದ್ದೇವೆ ಎಂಬುದು ತಿಳಿದಿತ್ತು. ಆದರೆ ನಮ್ಮನ್ನು ಸುತ್ತುವರೆದಿದ್ದ ಆ ಬೆಟ್ಟಗಳು ನಮ್ಮ ಸುತ್ತಲೂ ಎತ್ತರೆತ್ತರ್ದ ಶಿಖರಗಳಾಗಿ ನಿಂತಿದ್ದವು. ಅದರ ತುದಿಯನ್ನು ನೋಡಲು ನನ್ನ ತಲೆ ನನ್ನ ಕತ್ತಿನ ಹಿಂಭಾಗದ ತಳವನ್ನು ಮುಟ್ಟಬೇಕಿತ್ತು! ...
ಆ ಅಪೂರ್ವ ನೋಟವನ್ನು ನಾನು ನೋಡುತ್ತಿದ್ದಾಗ ಭ್ರಮಾಲೋಕದಂತೆ ಕಾಣುತ್ತಿದ್ದ ಆ ಸ್ಥಳದಲ್ಲಿ ನಾವಿದ್ದೇವೆ ಎಂಬ ಸತ್ಯವನ್ನು ಸುಳ್ಳೆಂದು ಭಾವಿಸಲು ಪ್ರಯತ್ನಿಸುತ್ತಿದ್ದೆ. ಬೆಟ್ಟಗಳು ಬೃಹತ್ತಾಗಿದ್ದು ಪರಿಶುದ್ಧತೆ ಮತ್ತು ಗಾಂಭೀರ್ಯತೆಯ ರೂಪ ತಾಳಿದ್ದವು. ಅವುಗಳ ನೋಟ ಮತ್ತು ಮೌನ ನಾನು ಜೀವಮಾನದಲ್ಲಿ ನೋಡಿದ ಯಾವುದೇ ವಿಷಯ, ವಸ್ತುವಿಗಿಂತ ಖಂಡಿತವಾಗಿ ಭಿನ್ನವಾಗಿತ್ತು. ನನಗೆ ಸೇರುವ ನನ್ನ ಪರಿಧಿಗೆ ಒಳಗೊಳ್ಳುವ ಯಾವ ಅಣುವೂ ಅಲ್ಲಿರಲಿಲ್ಲ...."


ಈ ವಾಕ್ಯಗಳು ಈ ಇಡೀ ಅನುಭವಕಥನಕ್ಕೆ ಹಿಡಿದ ಕಿರುಗನ್ನಡಿಯಾಗಿ ನಾನು ಭಾವಿಸುತ್ತೇನೆ. ತನ್ನ ಬಾಲ್ಯಕಾಲ ಅದರ ಮೂಲಕ ಕುಟುಂಬದ ಹಿನ್ನೆಲೆ, ಇತ್ಯಾದಿಗಳಿಗೆ ಸರಾಗವಾಗಿ ಹಿಮ್ಮುಖವಾಗಿ ಹರಿಯುವ ಲೇಖಕನ ನೆನಪು ತನ್ನ ಪ್ರಸ್ತುತ ಪರಿಸ್ಥಿತಿಯ ದಾರುಣತೆಯನ್ನು....- ಬರಿ ಆಟವಾಡುವ ಕಾಲವಷ್ಟೆ ಎಂದು ಮಜವಾಗಿದ್ದ ಆರೋಗ್ಯವಂತ ಸದೃಢ ಮತ್ತು ಜೀವನೋತ್ಸಾಹಿ ಆಟಗಾರರ ತಂಡವು ತನ್ನ ಆಟ ಆಡುವ ಮೊದಲೆ ಸೋತು ಅಸಹಾಯವಾಗಿ ನೆಲಕಚ್ಚಿದ ವಿಲಕ್ಷಣ ಪರಿಸ್ಥಿತಿಯಲ್ಲಿ ಮತ್ತೆ ಹುಮ್ಮಸದಿಂದ ಹಗುರು ಹೆಜ್ಜೆಯಲ್ಲಿ ಬದುಕಿನ ಬಯಲಲ್ಲಿ ಓಡುವ ಭರವಸೆಯೆಲ್ಲ ಮುರುಟಿ ಮಕಾಡೆ ಮಲಗಿದ ಹೊತ್ತಿನಲ್ಲಿ...- ಲೇಖಕ ನಾಂದೋ ಆ ಪರಿಸ್ಥಿತಿಯ ದಾರುಣತೆಯನ್ನು ತನ್ನ ನೆನಪುಗಳ ಮೂಲಕ ಎದುರಿಸುತ್ತಾನೆ. ಆ ನೆನಪುಗಳು ಮೂಡಿದ ಕ್ಷಣಗಳ ಮುಗ್ಧತೆ, ಜೀವನ್ಮುಖತೆ, ತಿಳುವಳಿಕೆ, ಭರವಸೆಗಳನ್ನೆ ಉಂಡು ಬದುಕುವ ಹೊಸದಾದ ಭೀಭತ್ಸ ಆಟದ ಪಟ್ಟುಗಳನ್ನ ಕಲಿಯುತ್ತಾನೆ.
ಈ ಪುಸ್ತಕದ ಕೆಲವು ಪುಟಗಳು ನಿಮ್ಮ ಓದಿಗೆ:

ಜೀವಂತಿಕೆ ಎಂಬುದು ಆ ಸ್ಥಳದಲ್ಲಿ ಅಸಾಧ್ಯವಾಗಿತ್ತು ಎಂಬ ಆತಂಕ ಮತ್ತು ಅಪಾಯಕಾರೀ ಎಚ್ಚರಿಕೆ ಆಳವಾಗಿ ನಾಟಿದ್ದ ಲೇಖಕ ನಾಂದೋ ಬಹುಶಃ ಇವತ್ತು/ಮುಂದೆ ಈ ಅನುಭವ ಕಥನವನ್ನು ಬರೆಯುವಾಗ ಮತ್ತೆ ಅದೇ ಕ್ಷಣಗಳನ್ನು ಮರುಬದುಕುವಾಗ ಕಣ್ಣು ಮುಚ್ಚಿದಾಗ ಕಂಡಿದ್ದು ಈ ಅಪಾಯದ ಸಾಧ್ಯತೆಗಳ ನಡುವೆ ನೆಟ್ಟಗೆ ಎದ್ದು ನಿಂತ ಆಂಡೀಸ್ ಪರ್ವತಶ್ರೇಣಿಯ ರುದ್ರಸೌಂದರ್ಯ. ಸುವಿಸ್ತಾರವಾದ ಖಾಲಿತನದ ಜೊತೆಜೊತೆಗೆ ಭೂಮಿಯೂ ಆಕಾಶವೂ ಸೇರಿನಿಂತ ಹಾಗಿನ ಮಿಲನದ ಸಾಧ್ಯತೆ ಮತ್ತು ಅಗಾಧತೆ. ಬಹುಶಃ ಲೇಖಕರ ಈ ಗ್ರಹಿಕೆ... ತಾನು ನಂಬಿದ ತಿಳಿದ ಮಾಡಬಹುದಾದ ಎಲ್ಲವೂ ನುಚ್ಚು ನೂರಾಗಿ ಬೀಳುತ್ತಿರುವಾಗಲೂ ಇನ್ನೊಂದೇನೋ ದಾರಿ ಇರಬಹುದು ಬದುಕಿಗೆ ಎಂಬ ಆಶಾಪೂರ್ಣ ನೋಟ, ಸೋಲುವ ಪಂದ್ಯದಲ್ಲೆ ಅತ್ಯುತ್ತಮವಾಗಿ ಆಡುವ ಆಟಗಾರನಂತೆ ಇದೇ ಇವರನ್ನು ಬದುಕಿಸಿಟ್ಟಿತೋ ಎನಿಸುತ್ತದೆ ಈ ಕಥನವನ್ನು ಓದಿದಾಗ.
ಬದುಕು ನಮಗೆ ಒಡ್ಡುವ ಎಲ್ಲಾ ಸವಾಲುಗಳಿಗೂ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ನಮ್ಮ ಬದುಕುಳಿಯುವಿಕೆ ಆಧರಿಸಿದೆ ಎಂಬ ಕರಾಳ ಸತ್ಯಕ್ಕೆ ಅತ್ಯಂತ ನೋವಿನ, ಹತಾಶೆಯ, ದಿಕ್ಕೆಟ್ಟ ಪರಿಸ್ಥಿತಿಯಲ್ಲಿ ಮುಖಾಮುಖಿಯಾಗುವ ಸೂಕ್ಷ್ಮಗ್ರಾಹಿಯಾದ ನಾಂದೋ...ಈ ಅನೂಹ್ಯ ಬದುಕಿನ ಪಂದ್ಯದ ನಿಯಮಗಳನ್ನು ಬಂದಂತೆ ಸ್ವೀಕರಿಸುತ್ತ ಹೋಗಿ ಗೆದ್ದೇಬಿಡುವ ಪಂದ್ಯದ ಈ ಕಥನ ಓದುವವರನ್ನು ಮೆತ್ತಗಾಗಿಸುತ್ತದೆ.
ಸ್ವತಃ ಲೇಖಕ ಈ ಪುನರ್ಜನ್ಮವನ್ನು ಹೊಂದಿದ ನಂತರ ಅದರ ಬಗ್ಗೆ ಸಾಮಾನ್ಯವಾಗಿ ಬರುವ ಹಮ್ಮಿನಿಂದ ಒರಟಾಗಿ ದೊರಗಾಗಿ ಮಾರ್ದವರಹಿತವಾಗಿ ಉಳಿದುಬಿಡದೆ......ಬದುಕನ್ನು ಅತಿಹೆಚ್ಚಿನ ಜೀವಪ್ರೀತಿಯಿಂದ ಆಲಂಗಿಸಿಕೊಂಡ ರೀತಿಗೆ ಮನಸ್ಸು ಮಾರುಹೋಗುತ್ತದೆ. ಅವನು ಅಲ್ಲಿಂದ ಬದುಕಿದ್ದು ಒಂದು ಸಾಂಕೇತಿಕ ಪವಾಡವಾಗಿದ್ದರೆ, ಅವನೊಳಗಿನ ಆರ್ದ್ರತೆಯ ಸೆಲೆ ಜಿನುಗುತ್ತಲೇ ಇರುವುದು ಅನಾದಿಕಾಲದಿಂದಲೂ ಘಟಿಸಿಕೊಂಡೇ ಬಂದ ಮನುಷ್ಯನೊಳಗಿರುವ ಪವಾಡವಾಗಿ ಸಾಬೀತಾಗುತ್ತದೆ. ಆ ವಿಷಯದಲ್ಲಿ ಮೂಲ ಪುಸ್ತಕ ಮತ್ತು ಅನುವಾದ ಎರಡೂ ಸುಲಲಿತವಾಗಿ ಗೆದ್ದುಬಿಟ್ಟಿವೆ. ಓದುವವರ ಮನಸ್ಸನ್ನು ಮೆತ್ತಗಾಗಿಸುವ ಈ ಕಥನ ನೈಜ ನಿರೂಪಣೆಯಲ್ಲಿ, ಕಸಿವಿಸಿ ಮೂಡಿಸದೆ ನಿಮ್ಮನ್ನು ತನ್ನೊಳಗೆ ಸೇರಿಸಿಕೊಳ್ಳುವಲ್ಲಿ, ಮಿಡಿಸುವುದರಲ್ಲಿ ಯಶಸ್ವಿಯಾಗಿದೆ.
ಆಂಡೀಸ್ ಪರ್ವತದ ಹಿಮಹೊದ್ದ ಕಣಿವೆಗಳಲ್ಲಿ ಉರುಗ್ವೆಯ ರಗ್ಬಿ ಆಟಗಾರರ ತಂಡದ ವಿಮಾನವು ಅಪಘಾತಕ್ಕೀಡಾಗಿ ಹೋಳಾಗಿ ಬೀಳುತ್ತದೆ. ಯಶಸ್ವಿ ಆಟಗಾರರ ತಂಡ ತಮ್ಮ ಹತ್ತಿರದವರನ್ನು ಕಣ್ಣೆದುರೆ ಕಳೆದುಕೊಂಡು ಸಾವು, ಗಾಯ, ನೋವು, ಆಘಾತಗಳಲ್ಲಿ ತತ್ತರಿಸುತ್ತ ತಿಂಗಳುಗಟ್ಟಲೆ ಹೊರಪ್ರಪಂಚದ ಸಹಾಯವನ್ನು ಎದುರುನೋಡುತ್ತ ನಿರ್ಜನ ಮತ್ತು ದುರ್ಗಮ ಕಣಿವೆಯಲ್ಲಿ ಒದ್ದಾಡುತ್ತಿದೆ. ವಿಪರೀತ ಚಳಿ, ಹಸಿವು, ಬಾಯಾರಿಕೆಗಳಲ್ಲಿ ಬದುಕು ಉಳಿಸಿಕೊಳ್ಳಲು ಅತ್ಯಂತ ದಯನೀಯ ಸ್ಥಿತಿಯಲ್ಲಿ ಸತ್ತು ಹೋದ ತನ್ನವರನ್ನೆ ತಿಂದು ತನ್ನ ಸಾವನ್ನು ದೂರ ನೂಕುವ ದುರಂತ ಕಥನವು ಈ ಪುಸ್ತಕದ ಒಂದು ಆಯಾಮ ಮಾತ್ರ. ಆ ಹೆಪ್ಪುಗಟ್ಟಿಸುವ ಹಿಮವು ನಾಗರಿಕ ಸಂವೇದನೆಗಳನ್ನೆಲ್ಲ ಫ್ರೀಝ್ ಮಾಡುತ್ತಾ ಬದುಕಬೇಕು ಎಂಬ ಜೀವಿಸಹಜ ಆಕಾಂಕ್ಷೆಯೊಂದನ್ನ ಮಾತ್ರವೇ ಫೋಕಸ್ ಮಾಡಿದ ಹಾಗಿದೆ. ವಿಸ್ತಾರವಾದ ಜೀವತುಡಿತದ ಕಥನವು ಇಲ್ಲಿ ಗಟ್ಟಿ ನೆಲವನ್ನು ಸೀಳಿಕೊಂಡು ಹೊರಬರುವ ಸುಕೋಮಲ ಮೊಳಕೆಯನ್ನ ನೆನಪಿಸುವ ಹಾಗೆ ಚಿತ್ರಿತವಾಗಿದೆ.
ಬದುಕಿಗಾಗಿ ಅವರು ಇನ್ನಿಲ್ಲದಂತೆ ನಡೆಸುವ ಪ್ರಯತ್ನದ ಜೊತೆಜೊತೆಗೆ ಅದನ್ನು ಸಾಧ್ಯವಾಗಿಸಿದ ಹಲವಾರು ಒಂದಕ್ಕೊಂದು ಸಂಬಧವಿಲ್ಲದ ಹಾಗೆ ಕಾಣುವ ಆದರೆ ನಿಜಕ್ಕೂ ಆಳದಲ್ಲಿ ಒಂದನ್ನೊಂದು ಪ್ರಭಾವಿಸಿರುವ ಹಲವು ವಿಷಯಗಳ ಬಗ್ಗೆ ಈ ಪುಸ್ತಕದ ಮೂಲಕ ಲೇಖಕ ನಾಂದೊ ಬೆಳಕು ಚೆಲ್ಲುತ್ತಾರೆ. ಹೇಗೆ ರಗ್ಬೀ ಎಂಬ ಚೆಂಡಾಟದ ತಂಡ ಮತ್ತು ಕ್ರೀಡಾ ಮನೋಭಾವವು ಆ ದುರ್ಗಮ ಮನಸ್ಥಿತಿಯಲ್ಲಿ ಅವರನ್ನು ಮುನ್ನಡೆಸಿತು. ಸನ್ನಿವೇಶಗಳನ್ನು ಎದುರಿಸಲು, ಒಪ್ಪಿಕೊಳ್ಳಲು, ಬದಲಾಗಲು. ಕಲಿಯಲು, ಆ ಮೂಲಕ ಬದುಕಲು ಪ್ರೇರೇಪಿಸಿತು ಎಂಬುದನ್ನ ಸವಿವರವಾಗಿ ಆಪ್ತವಾಗಿ ಕಟ್ಟಿಕೊಡುತ್ತದೆ ಈ ಕಥನ. ಈ ನೆಲೆಯಲ್ಲಿ ಇದನ್ನು ಅನುಭಾವ ಕಥನ ಎಂದೂ ಕರೆಯಬಹುದೇನೋ. ಬಹುಶಃ ಈ ಮನೋಭಾವವೇ ಮುಂದೆ ಇದರಿಂದ ಹೊರಬಂದು ಬದುಕು ಕಟ್ಟಿಕೊಳ್ಳುವಾಗ ಒಂದು ಪರಿಪೂರ್ಣ ಅಥವಾ ಹಗುರಾದ ನೋಟವನ್ನು, ಯಾವ ಒಜ್ಜೆಗಳೂ ಇಲ್ಲದೆ ಸ್ವೀಕೃತಿಯ, ಒಪ್ಪಿಕೊಳ್ಳುವಿಕೆಯ ನಿಲುವನ್ನು ಲೇಖಕರಿಗೆ ಕೊಡುತ್ತದೆ. ಈ ನಿಲುವು, ಈ ವ್ಯಕ್ತಿತ್ವ ಇದು ಈ ಕಥನದುದ್ದಕ್ಕೂ ನಮ್ಮ ಅರಿವಿನ ಭಾಗವಾಗಿ ನಿಲ್ಲುತ್ತದೆ. ಧಾರಣ- ಭರಿಸುವುದು ಎಂಬುದರ ವಿಶ್ವರೂಪವನ್ನ ಈ ಪುಸ್ತಕ ಹಿಡಿದಿಟ್ಟಿದೆ ಎಂದನಿಸುತ್ತದೆ ನನಗೆ.
ಈ ಪುಸ್ತಕ ಓದಿ ಅದನ್ನ ಅನುಭವಿಸಿಯೇ ನಿಮ್ಮದಾಗಿಸಿಕೊಳ್ಳಬೇಕು. ನಿಮ್ಮ ನಿಮ್ಮ ಬದುಕಿನ ಮಸೂರದಲ್ಲಿ ಈ ಕಥನ ಹಾಯುವಾಗ ನಾವಿರುವ ರೆಫರೆನ್ಸ್ ಪಾಯಿಂಟಿನಿಂದ ಕಾಣಬಹುದಾದ ಕಾಮನಬಿಲ್ಲಿನ ಬಣ್ಣಗಳು ಮತ್ತು ಕಮಾನು ಅವರವರ ಓದಿನ ಖಾಸಗಿಕ್ಷಣಗಳಿಗೆ ಮಾತ್ರ ದಕ್ಕಬಹುದಾದದ್ದು ಎಂದು ನಮ್ರತೆಯಿಂದ ಹೇಳಬಯಸುತ್ತೇನೆ.
ಸೂಕ್ಷ್ಮವಾಗಿ ಬದುಕನ್ನು ಗ್ರಹಿಸುವ ನಮಗೆ ಅದನ್ನು ಸ್ಥೂಲವಾಗಿ ಗ್ರಹಿಸುವ ವಿಷಯದಲ್ಲಿ ಸ್ವಲ್ಪ ಸಮತೋಲ ತಪ್ಪುತ್ತದೆ. ಅನಿರೀಕ್ಷಿತ ಘಟನೆಗಳು ಸಂದರ್ಭಗಳು ನಮ್ಮ ಗ್ರಹಿಕೆಯನ್ನು ತಿದ್ದುವ ಸವಾಲುಗಳನ್ನು ಒಡ್ದುತ್ತವೆ. ನಮ್ಮ ಪರಿಧಿ ಇದೇ ಇಷ್ಟೆ ಎಂದುಕೊಳ್ಳದೆ ಅದನ್ನು ಮೀರುವ, ಕೊನೆಪಕ್ಷ ಮೀರಲು ಪ್ರಯತ್ನಿಸುವ ಒಪ್ಪಿಕೊಳ್ಳುವ ಮನೋಭಾವವು ಸ್ಥೂಲವಾದ ಸುವಿಸ್ತಾರವಾದ ಈ ಜಗತ್ತಿನ ಬ್ರಹ್ಮಾಂಡದಲ್ಲಿ ನಮ್ಮ ಅಣುತನವನ್ನೂ ಮತ್ತು ಹೇಗೆ ಈ ಅಣುವೇ ಬ್ರಹ್ಮಾಂಡದ ಮೂಲಧಾತು ಎಂಬುದನ್ನೂ ಮನದಟ್ಟು ಮಾಡಿಸುತ್ತದೆ. ಈ ಅಂಶವು ಈ ಪುಸ್ತಕದಲ್ಲಿ ಕಲ್ಪಿಸಲೂ ಅಸಾಧ್ಯವಾದ ಘಟನೆಗಳ ಮೂಲಕ ಅನಾವರಣಗೊಂಡಿದೆ.
ಮೂಲಲೇಖಕ ನಾಂದೋ ಮೊದಲು ಈ ದುರಂತಕ್ಕೀಡಾದಾಗ, ಎರಡನೆಯ ಸಲ ಬರೆದಾಗ ಅನುಭವಿಸಿದ ಈ ಅವಾಕ್ಕಾಗಿಸುವ ಕಥನ ಮತ್ತೆ ಸಂಯುಕ್ತ ಬರೆಯುವಾಗ ಸಮರ್ಥವಾಗಿ ಸಶಕ್ತವಾಗಿ ಬಂದಿದೆ. ಸಂಯುಕ್ತ ತನಗೆ ತೀವ್ರವಾಗಿ ತಟ್ಟಿದ ಈ ಕಥನವನ್ನು ಮೂಲದ ಆಶಯ, ಕಟ್ಟೋಣ, ನಿರೂಪಣೆ, ವಿಷಯ ವಿಸ್ತಾರ ಮತ್ತು ಆಳ ಎಲ್ಲಕ್ಕೂ ಬದ್ಧವಾಗಿಯೇ ನಮ್ಮ ಕನ್ನಡದ ಓದಿಗೆ ಒಗ್ಗಿಸಿದ್ದಾರೆ. ಇದೊಂದು ಅತ್ಯುತ್ತಮ ಪ್ರಯತ್ನ.ಲೇಖಕಿಯ ಮೊದಲ ಪ್ರಯತ್ನವಾಗಿಯೂ ಇದು ಅತ್ಯಂತ ಸಶಕ್ತ ಆಪ್ತ ಅನುವಾದ. ಮೂಲವನ್ನು ಓದಿಯೂ ಇದನ್ನೂ ಓದಲೇಬೇಕಿನ್ನಿಸುವಷ್ಟು ಸೊಗಸಾದ ಅನುವಾದ ಎಂದು ನನಗನ್ನಿಸಿರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ - ಈ ಪುಸ್ತಕವನ್ನು ಓದಿದರೆ ಅದು ನಿಮಗೆ ಮನದಟ್ಟಾಗುತ್ತದೆ. ಈ ವರ್ಷದ ಒಂದು ಮಸ್ಟ್ ರೀಡ್ ಪಟ್ಟಿಯಲ್ಲಿ ಇರಬೇಕಾದ ಈ ಪುಸ್ತಕವನ್ನು ಪ್ರಕಟಿಸುತ್ತಿರುವ ಛಂದ ಪ್ರಕಾಶನಕ್ಕೆ ಅಭಿನಂದನೆಗಳು. ನಮ್ಮ ಸಂಯುಕ್ತಾ ಪುಲಿಗಲ್ ಅವರ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ತಕ್ಕದಾಗಿ ಬರುತ್ತಿರುವ ಈ ಮೊದ ಮೊದಲ ಪುಸ್ತಕ ಅವರ ಬರಹದ ಬದುಕಿನ ಮೊದಲ ಮೈಲಿಗಲ್ಲು. ಅವರೊಡನೆ ಇನ್ನೂ ದೂರದಾರಿಯಲ್ಲಿ ಓದೋದುತ್ತ ಹೋಗುವ ಖುಷಿ ನನ್ನದು ಮತ್ತು ಓದುಪ್ರೀತಿಯ ನಿಮ್ಮೆಲ್ಲರದೂ ಆಗಲಿ ಎಂದು ಹಾರೈಸುತ್ತೇನೆ. ಅನುವಾದಸಾಗರದ ಮೊದಲ ಜಲಯಾನವನ್ನ ಯಶಸ್ವಿಯಾಗಿ ಪೂರೈಸಿರುವ ಸಂಯುಕ್ತಾಗೆ ಅಭಿನಂದನೆಗಳು. ಹೊಸ ಹೊಸ ಮೇರೆಗಳನ್ನ ಹುಡುಕುವ ಈ ಹುಡುಕಾಟ ನಿರಂತರವಾಗಿರಲಿ ಅಕ್ಷರವಾಗಲಿ.



ಎಂಟನೆಯ ದಿನದ ಮಧ್ಯಾಹ್ನ ಸೂಜಿಯ ಮೇಲೆ ತೋಳು ಬಳಸಿ ಮಲಗಿದ್ದೆ. ಆಗ ಅವಳಲ್ಲಿ ಏನೋ ಬದಲಾವಣೆಯಾದ ಅನುಭವವಾಯಿತು. ಅವಳ ಮುಖದಿಂದ ನೋವಿನ ಛಾಯೆ ಮಾಯವಾಗಿತ್ತು. ದೇಹದ ಬಿಗಿ ಸಡಿಲವಾಗಿತ್ತು. ಅವಳ ಉಸಿರಾಟ ತೆಳುವಾಗಿ, ನಿಧಾನವಾಗಿತ್ತು. ನನ್ನ ತೋಳಬಂಧಿಯಿಂದ ಅವಳ ಜೀವ ಜಾರಿಹೋಗುತ್ತಿದ್ದಂತೆ ಭಾಸವಾಗುತ್ತಿತ್ತು. ಆದರೆ ಅದಕ್ಕಾಗಿ ನಾನು ಏನನ್ನೂ ಮಾಡದ ಅಸಹಾಯಕತೆಯಲ್ಲಿ ಇದ್ದೆ. ಕೊನೆಗೆ ಅವಳ ಉಸಿರಾಟ ಸಂಪೂರ್ಣ ನಿಂತಿತ್ತು, ಅವಳು ನಿಶ್ಚಲವಾದಳು.
“ಸೂಜಿ? ಓ ದೇವರೇ, ದಯವಿಟ್ಟು ನಿಲ್ಲು...ಸೂಜಿ! ನಾನು ಅರಚಿದೆ.
ನಾನು ಮೊಣಕಾಲೂರಿ ಕೂತು ಅವಳ ಬೆನ್ನನ್ನು ನೆಲಕ್ಕೆ ತಾಗಿಸಿ ಅವಳ ತುಟಿಯಲ್ಲಿ ತುಟಿಯೊತ್ತಿ ಗಾಳಿ ಊದಲು ಪ್ರಯತ್ನಿಸಿದೆ. ಅದನ್ನು ಹೇಗೆ ಮಾಡುವುದು ಎಂದೂ ನನಗೆ ಸರಿಯಾಗಿ ತಿಳಿದಿರಲಿಲ್ಲ. ಹೇಗಾದರೂ ಮಾಡಿ ಅವಳನ್ನು ಕಾಪಾಡುವ ಆತುರದಲ್ಲಿದ್ದೆ. “ಸೂಜಿ, ದಯವಿಟ್ಟು, ನನ್ನೊಬ್ಬನನ್ನೇ ಬಿಟ್ಟು ಹೋಗಬೇಡ ಎಂದು ಕೂಗಿದೆ. ನಾನು ನಿತ್ರಾಣನಾಗುವವರೆಗೂ ಅವಳ ಜೀವವನ್ನು ಹಿಡಿದಿಡಲುಯತ್ನಿಸಿದೆ. ನನ್ನೊಟ್ಟಿಗೆ ರಾಬರ್ಟೊ ಮತ್ತು ಕಾರ್ಲಿಟೊಸ್ ಪ್ರಯತ್ನಿಸಿದರು. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಇತರರು ಮೌನವಾಗಿ ನನ್ನ ಸುತ್ತುವರೆದಿದ್ದರು
ರಾಬರ್ಟೊ ನನ್ನ ಬಳಿ ಬಂದು, “ಅವಳು ದೇಹ ತ್ಯಜಿಸಿದ್ದಾಳೆ ನ್ಯಾಂಡೊ ಎಂದು ನನ್ನ ಬೆನ್ನು ಸವರಿ, “ಈ ರಾತ್ರಿ ಅವಳೊಟ್ಟಿಗೆ ಇರು. ನಾಳೆ ಅವಳ ದೇಹವನ್ನು ಸಮಾಧಿ ಮಾಡೋಣ ಎಂದ. ನಾನು ನನ್ನ ತಂಗಿಯನ್ನು ತೋಳುಗಳಲ್ಲಿ ಬಂಧಿಸಿದೆ. ನಾನು ಆ ಕ್ಷಣದಲ್ಲಿ ನನ್ನ ತಂಗಿಗೆ ಯಾವ ನೋವೂ ಆಗದಂತೆ, ಗಟ್ಟಿಯಾಗಿ ಬಿಗಿದಪ್ಪಬಹುದಾಗಿತ್ತು. ಅವಳ ದೇಹವಿನ್ನೂ ಬೆಚ್ಚಗಿತ್ತು. ಅವಳ ಕೂದಲು ನನ್ನ ಕೆನ್ನೆಯ ಮೇಲೆ ಮೃದುವಾಗಿ ಸವರುತ್ತಿತ್ತು. ಆದರೆ, ನನ್ನ ಕೆನ್ನೆಯನ್ನು ಅವಳ ತುಟಿಗೆ ತಾಗಿಸಿದಾಗ ಅವಳ ಬೆಚ್ಚನೆಯ ಉಸಿರು ನನಗೆ ತಾಕಲಿಲ್ಲ. ನನ್ನ ಸೂಜಿ ಇನ್ನಿಲ್ಲವಾಗಿದ್ದಳು. ನಾನು ಅವಳ ದೇಹದ ಪರಿಮಳ, ಕೂದಲಿನ ಮೃದುತ್ವ, ಸೌಮ್ಯ ಶರೀರ ಎಲ್ಲವನ್ನೂ ನನ್ನ ನೆನಪಿನಲ್ಲಿ ತುಂಬಿಡಲು ವ್ರಯತ್ನಿಸಿದೆ. ನಾನು ಅವನ್ನೆಲ್ಲ ಕಳೆದುಕೊಳ್ಳುತ್ತಿದ್ದೇನೆ ಎಂದು ನೆನೆದು ದುಃಖ ಒತ್ತರಿಸಿ ಬರುತ್ತಿತ್ತು. ನನ್ನ ದೇಹ ಮನಸ್ಸೆಲ್ಲಾ ನೋವಿನಿಂದ ಚೀತ್ಕರಿಸಿತು. ದುಃಖನನ್ನನ್ನಾವರಿಸುತ್ತಿದ್ದಂತೆಯೇ, ಮತ್ತೊಮ್ಮೆ ಆ ಗಂಭೀರ ಧ್ವನಿ ನನ್ನ ಕಿವಿಯಲ್ಲಿ ಹೇಳಿತು
“ಅಳು ದೇಹದ ಉಪ್ಪನ್ನು ಕಡಿಮೆ ಮಾಡುತ್ತದೆ." 
ನಾನು ಇಡೀ ರಾತ್ರಿ ಅವಳೊಟ್ಟಿಗೆ ಎಚ್ಚರವಾಗಿಯೇ ಕಳೆದೆ. ನನ್ನ ಎದೆ ದುಃಖದಿಂದ ಭಾರವಾಗಿತ್ತು. ಆದರೆ ಅಳು, ಕಣ್ಣೀರು ಆ ಸಮಯದಲ್ಲಿ ನನಗೆ ದುಬಾರಿಯಾಗಿತ್ತು. ಮರುದಿನ ಮುಂಜಾನೆ ಸೂಜಿಗೆ ನೈಲಾನ್ ದಾರಗಳನ್ನು ಕಟ್ಟಿ ವಿಮಾನದ ಹೊರಗೆ ಎಳೆದೊಯ್ದರು. ಅವಳನ್ನು ಹಿಮದ ನೆಲದ ಮೇಲೆ ಎಳೆದೊಯ್ಯುವುದನ್ನು ನಾನು ನೋಡುತ್ತಿದ್ದೆ. ಆ ಒರಟಾದ, ಜರೆದಂತಹ ಎಳೆಯುವಿಕೆ ನನಗೆ ನೋಡಲು ಕಷ್ಟವಾಗುತ್ತಿತ್ತು. ಆದರೆ ಇತರರಿಗೆ ಅದು ಅಭ್ಯಾಸವಾಗಿಹೋಗಿತ್ತು. ಸತ್ತ ನಂತರ ದೇಹ ಹೆಚ್ಚು ಭಾರವಾಗಿ ಹೊತ್ತೊಯ್ಯಲು ಕಷ್ಟವಾಗಿ, ಆ ಹಿಮದಲ್ಲಿ ಇನ್ನೂ ಅಸಾಧ್ಯವಾಗಿ ತೋರುತ್ತಿತ್ತು. ಅದಕ್ಕೆ ಹಾಗೆ ಎಳೆದೊಯ್ಯುವುದು ಸುಲಭವಾಗುತ್ತಿತ್ತು. ಆದ್ದರಿಂದ ನಾನೂ ಅದನ್ನು ಅನಿವಾರ್ಯವೆಂದು ಒಪ್ಪಿದೆ.
ಉಳಿದ ಶರೀರಗಳ ಸಮಾಧಿಯಾಗಿದ್ದ, ವಿಮಾನದ ಎಡಭಾಗದತ್ತ ಸೂಜಿಯನ್ನು ಎಳೆದೊಯ್ದೆವು. ಹೆಪ್ಪುಗಟ್ಟಿದ ಕಳೇಬರಗಳು ಮಂಜಿನ ನಡುವೆ ನಿಖರವಾಗಿ ಕಂಡುಬರುತ್ತಿದ್ದವು. ಆ ದೇಹಗಳು ಕೆಲವೇ ಇಂಚುಗಳ ಹಿಮದ ಲೇಪನದಿಂದ ಆವೃತಗೊಂಡಿದ್ದವು. ಅಲ್ಲಿ ನೋಡುತ್ತಿದ್ದಂತೆ ಸುಲಭವಾಗಿ ನನಗೆ ನನ್ನ ತಾಯಿಯ ನೀಲಿ ಅಂಗಿ ಕಾಣಿಸಿತು. ಅವಳ ಪಕ್ಕದಲ್ಲೇ ಸೂಜಿಗಾಗಿ ಸಣ್ಣ ಹಳ್ಳವನ್ನು ತೋಡಿದೆ. ಸೂಜಿಯನ್ನು ಅಲ್ಲಿ ಮಲಗಿಸಿ, ಅವಳ ಕೂದಲು ಸವರಿದೆ. ನಂತರ ಅವಳ ದೇಹವನ್ನು ನಿಧಾನವಾಗಿ ಮಂಜಿನ ಮರಳಿನಿಂದ ಮುಚ್ಚಿದೆ. ಇಡೀ ದೇಹ ಹಿಮದಲ್ಲಿ ಮುಚ್ಚಿಹೋಗುವವರೆಗೂ ಮುಖವನ್ನು ತೆರೆದೇ ಇಟ್ಟಿದ್ದೆ. ಅವಳ ಮುಖ ಬೆಚ್ಚನೆಯ ಹೊದಿಕೆಯಡಿ ನೆಮ್ಮದಿಯ ನಿದ್ರೆಯಲ್ಲಿ ಜಾರಿದಂತೆ ಕಾಣುತ್ತಿತ್ತು. ನಾನೊಮ್ಮೆ ಕಡೇ ಬಾರಿಗೆ ಅವಳ ಮುಖವನ್ನು ನೋಡಿ ನನ್ನ ಮನಸಾರೆ ತುಂಬಿಕೊಂಡು ಅವಳನ್ನು ಸಂಪೂರ್ಣ ಹಿಮಾವೃತಗೊಳಿಸಿದೆ. ನನ್ನ ಪ್ರೀತಿಯ ಸೂಜಿ ನನ್ನಿಂದ ಶಾಶ್ವತವಾಗಿ ದೂರವಾಗಿದ್ದಳು.
ಕೆಲಸ ಮುಗಿದ ನಂತರ ಜೊತೆಗಾರರೆಲ್ಲರೂ ವಿಮಾನದತ್ತ ತೆರಳಿದರು. ನಾನು ಪರ್ವತದ ಎತ್ತರವನ್ನು ಗಮನಿಸಿದೆ. ಪಶ್ಚಿಮದತ್ತ ಬೆಟ್ಟದ ನಡುವಿನ ದಾರಿಯನ್ನು ಹುಡುಕುತ್ತಾ ನನ್ನ ಕಣ್ಣು ಸುತ್ತಾಡಿತು. ಕಣ್ಣೆತ್ತರಿಸಿದಷ್ಟು ಎತ್ತರಕ್ಕೆ ಬೆಟ್ಟದ ತುದಿ ಸಾಗುತ್ತಲೇ ಇದೆ. ನಾವು ವಿಮಾನಾಪಘಾತದಲ್ಲಿ ಆಳದಾಳದೊಳಕ್ಕೆ ಉರುಳಿ ಬಿದ್ದಿದ್ದೇವೆ. ಇದು ಹೇಗಾಗಲು ಸಾಧ್ಯ? ನಾವು ಚಿಲಿಯಲ್ಲಿ ಒಂದು ಪಂದ್ಯವಾಡಲು ಹೊರಟಿದ್ದೆವು! ಇದ್ದಕ್ಕಿದ್ದಂತೆ ನನ್ನೊಳಗೆಲ್ಲ ಒಂದು ರೀತಿಯ ಶೂನ್ಯವಾವರಿಸಿತು. ಖಾಲಿತನ ಕಾಡಿತು. ಅಲ್ಲಿವರೆಗಿನ ನನ್ನೆಲ್ಲ ಸಮಯ ತಂಗಿ ಸೂಜಿಯ ಆರೈಕೆಯಲ್ಲಿ ಕಳೆದಿದ್ದೆ. ನನ್ನ ಸ್ವಂತದ ನೋವು, ಹೆದರಿಕೆಗಳನ್ನು ಅವಳ ಆರೈಕೆಯ ಜವಾಬ್ದಾರಿ ಮುಚ್ಚಿಟ್ಟಿತ್ತು. ಆದರೆ ಈಗ ನಾನು ಸಂಪೂರ್ಣ ಏಕಾಂಗಿಯಾಗಿದ್ದೆ. ನನ್ನ ಸುತ್ತುವರೆದಿದ್ದ ಭಯಾನಕ ಸತ್ಯದಿಂದ ನನ್ನನ್ನು ದೂರವಾಗಿಸುವ ಇನ್ಯಾವ ಕಾರಣವೂ ನನ್ನ ಬಳಿ ಇರಲಿಲ್ಲ. ನನ್ನ ತಾಯಿ, ತಂಗಿ ಸತ್ತಿದ್ದರು. ಸ್ನೇಹಿತರೂ ಇಲ್ಲವಾಗಿದ್ದರು. ನಾವು ಗಾಯಗೊಂಡು, ಹೊಟ್ಟೆ ಹಸಿದು, ಚಳಿಗೆ ನಡುಗಿ ಮರಗಟ್ಟುತ್ತಿದ್ದೆವು. ಒಂದು ವಾರಕ್ಕಿಂತ ಹೆಚ್ಚು ದಿನಗಳು ಕಳೆದಿದ್ದರೂ ರಕ್ಷಣಾಪಡೆಯ ಯಾವ ಸುದ್ದಿಯೂಇರಲಿಲ್ಲ. ಆ ಪರ್ವತಗಳ ಭಯಾನಕ ಶಕ್ತಿ ನಮ್ಮನ್ನು ಆವರಿಸುತ್ತ ತನ್ನ ನಿರ್ದಾಕ್ಷಿಣ್ಯ, ನಿಷ್ಕರುಣ ರೌದ್ರತೆಯನ್ನು ನಮಗೆ ತೋರಿಸುತ್ತಿದೆ ಎಂಬ ಅನುಭವ. ಆ ಕ್ಷಣದಲ್ಲಿ ನಾನು ಸುತ್ತಲೂ ಗಮನಿಸಿ, ಮನೆಯಿಂದ ಎಷ್ಟು ದೂರ ಗಮಿಸಿ ಈ ತಾಣದಲ್ಲಿ ಅನಾಥನಾಗಿದ್ದೆ ಎಂಬ ಕಲ್ಪನೆಯಿಂದ, ಹತಾಶೆಯಿಂದ ಕುಸಿದುಬಿದ್ದೆ. ಮೊಟ್ಟಮೊದಲ ಬಾರಿಗೆ ನಾನಿನ್ನು ಉಳಿಯಲಾರೆ ಎನಿಸಿತ್ತು.
ಇಷ್ಟಕ್ಕೂ ನಾನೀಗಾಗಲೆ ಸತ್ತಿದ್ದೆ. ನನ್ನ ಬದುಕಿನ ಸತ್ವವನ್ನೆಲ್ಲ ನನ್ನಿಂದ ಕಸಿದುಕೊಂಡಾಗಿತ್ತು. ನಾನು ಕನಸು ಕಂಡ ಭವಿಷ್ಯ ನನ್ನದಾಗಿ ಉಳಿದಿರಲಿಲ್ಲ. ನಾನು ಮದುವೆಯಾಗಬಹುದಾದ ಹೆಣ್ಣಿಗೆ ನಾನು ಯಾರೆಂದು ತಿಳಿಯುವುದೂ ಇಲ್ಲ. ನನಗೆ ಹುಟ್ಟಬಹುದಾದ ಮಕ್ಕಳೂ ಹುಟ್ಟಲಾರರು. ನಾನು ಇನ್ನೆಂದಿಗೂ ನನ್ನ ಅಜ್ಜಿಯ ಪ್ರೀತಿಯ ನೋಟವನ್ನಾಗಲಿ, ಅಕ್ಕ ಗ್ರೆಸಿಲ್ಲಾಳ ಆತ್ಮೀಯ ಅಪ್ಪುಗೆಯನ್ನಾಗಲಿ ಅನುಭವಿಸಲಾರೆ. ನನ್ನ ತಂದೆಯ ಬಳಿಗೆ ಇನ್ನೆಂದಿಗೂ ಮರಳಲಾರೆ!
ಈ ಗಾಢ ಆಲೋಚನೆಗಳ ನಡುವೆಯೇ ನನ್ನ ಮನದಲ್ಲಿ ತಂದೆಯ ಚಿತ್ರಣ ಮೂಡಿಬಂತು. ಅವರು ಅನುಭವಿಸುತ್ತಿರಬಹುದಾದ ಏಕಾಂಗಿತನ ನನ್ನನ್ನು ಘಾಸಿಗೊಳಿಸಿತು. ಆ ಕ್ಷಣವೇ ಅವರ ಬಳಿ ಓಡಿ ಹೋಗಬೇಕೆಂಬ ವಿಚಿತ್ರ ಸೆಳತಕ್ಕೆ ಒಳಗಾದೆ. ಆದರೆ, ನನ್ನೆಲ್ಲ ನಿಶ್ಶಕ್ತಿ, ಅಸಹಾಯಕತೆ ಹುಚ್ಚನನ್ನಾಗಿಸುತ್ತಿದ್ದವು. ಆಗ, ಆ ಕ್ಷಣ, ನನ್ನ ತಂದೆ ಅರ್ಜೆಂಟಿನಾ ನದಿಯ ದೋಣಿಯಲ್ಲಿ ಸೋಲುತ್ತಾ ಸೋಲುತ್ತಾ ಗೆದ್ದ ಚಿತ್ರಣ ಕಣ್ಣ ಮುಂದೆ ಬಂತು. ಅವರ ಮಾತುಗಳು ನನಗೆ ನೆನಪಾದವು: “ನಾನು ಸೋಲೊಪ್ಪುವುದಿಲ್ಲ ಎಂದು ನಿರ್ಧರಿಸಿದೆ. ನಾನು ಇನ್ನೂ ಸ್ವಲ್ಪ ಕ ಷ್ಟಪಡುತ್ತೇನೆ ಎಂದು ನಿರ್ಧರಿಸಿದೆ.
ಅದು ನನ್ನಿಷ್ಟದ ಕಥೆಯಾಗಿತ್ತು. ಆದರೆ ಆ ಕ್ಷಣ ನನಗೆ ಅದು ಕಥೆಗಿಂತ ಮಿಗಿಲಾದ್ದು ಎಂಬ ಅರಿವಾಯಿತು. ಅದು ನನ್ನ ತಂದೆ ನನಗೆ ಬಳುವಳಿಯಾಗಿ ಕೊಟ್ಟ ಧೈರ್ಯ ಮತ್ತು ವಿವೇಕದ ಸಂಕೇತವಾಗಿತ್ತು. ಒಂದು ಕ್ಷಣ ನನ್ನಲ್ಲೇ ಅವರಿರುವ ಅನುಭವವಾಯಿತು. ಅದರ ನಂತರ ಒಂದು ತೀವ್ರ ನಿಶ್ಶಬ್ದ ನನ್ನೊಳಸುಳಿದಿತ್ತು.
ಪಶ್ಚಿಮದ ಬೆಟ್ಟತಪ್ಪಲಿನತ್ತ ನನ್ನ ಕಣ್ಣು ಹಾಯಿಸಿದೆ. ಅದರ ಉದ್ದಕ್ಕೂ ನನ್ನನ್ನು ನನ್ನ ಮನೆ ತಲುಪಿಸುವ ದಾರಿಯನ್ನು ಕಣ್ಣಲ್ಲೇ ಹೆಣೆದೆ. ಆ ದಾರಿ ನನ್ನ ತಂದೆಯ ಪ್ರೀತಿ ತುಂಬಿದ ಜೀವಧಾರೆಯಂತೆ ಭಾಸವಾಯಿತು. ಪಶ್ಚಿಮದತ್ತ ನೋಡುತ್ತಲೇ ಮೌನವಾಗಿನನ್ನ ತಂದೆಗೆ ಒಂದು ವಾಗ್ದಾನವಿತ್ತೆ. “ನಾನು ಕಷ್ಟಪಡುತ್ತೇನೆ, ಹೋರಾಡುತ್ತೇನೆ. ಮನೆಗೆ ಬರುತ್ತೇನೆ. ನಮ್ಮಿಬ್ಬರ ನಡುವಿನ ಜೀವತಂತುವನ್ನು ಈ ರೀತಿ ಮುರಿದು ಬೀಳಲು ನಾನು ಬಿಡುವುದಿಲ್ಲ. ನಿನಗಿದೋ ನನ್ನ ವಾಗ್ದಾನ. ನಾನು ಈ ಬೆಟ್ಟತಪ್ಪಲಿನಲ್ಲಿ ಸಾಯುವುದಿಲ್ಲ! ಇಲ್ಲಿ ಸಾಯುವುದಿಲ್ಲ!
ಎಂದಿನಂತೆ ಮಾಂಟೆವಿಡಿಯೊನಲ್ಲಿ ಸಾಧಾರಣ ಬದುಕು ಜೀವಿಸುತ್ತಿದ್ದನನಗೆ ಆ ಸಮಯದಲ್ಲಿ ಸೂಜಿ ನನ್ನಿಂದ ದೂರಾಗಿದ್ದಿದ್ದರೆ ಬಹುಶಃ ತಿಂಗಳಾನುಗಟ್ಟಲೆ ಆ ಆಘಾತದಿಂದ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸಂದರ್ಭ ಹಾಗಿರಲಿಲ್ಲ. ಇಲ್ಲಿನ ಯಾವುದೇ ನಿಷ್ಕರುಣ ರಿಸರ ನನಗೆ ದುಃಖದಲ್ಲಿ ಮುಳುಗಿ ನೋವಿನಲ್ಲಿ ಉನ್ಮತ್ತನಾಗುವಷ್ಟು ಸ್ವಾತಂತ್ರ್ಯವನ್ನು ಕೊಟ್ಟಿರಲಿಲ್ಲ. ಮತ್ತೊಮ್ಮೆ ನನ್ನೊಳಗಣ ಆ ನಿರ್ದಾಕ್ಷಿಣ್ಯ,ತಣ್ಣನೆಯ ಧ್ವನಿ ನನ್ನೆಲ್ಲ ಮಾನಸಿಕ ಖಿನ್ನತೆಗಳನ್ನು ಮೀರಿ ಹೊರಜಿಗಿದುನನಗೆ ಕೇಳಿಸಿತು. ಮುಂದಿನದನ್ನು ಆಲೋಚಿಸು. ನೀನು ಮುಂzಬದಲಿಸಬಲ್ಲ ಕ್ಷಣಗಳಿಗಾಗಿ ನಿನ್ನ ಶಕ್ತಿಯನ್ನು ಉಳಿಸಿಕೊ. ಹಿಂದಿನದನ್ನುನೆನೆಸಿಕೊಂಡು ಕೊರಗುತ್ತಿದ್ದರೆ ನೀನು ಸಾಯಿತ್ತೀಯೆ. ನನ್ನ ದುಃಖದ ಮಡುವನ್ನು ಅಷ್ಟು ಸುಲಭವಾಗಿ ಇಲ್ಲವಾಗಿಸಲು ನನಗೆ ಸಾಧ್ಯವಾಗಲಿಲ್ಲ. ಆ ಸ್ಥಳದಲ್ಲಿ ಅಂದಿನವರೆಗೂ ನನ್ನ ಜೊತೆಗಿದ್ದ ಸೂಜಿಯ ಇಲ್ಲದಿರುವಿಕೆನನ್ನನ್ನು ಕಾಡಿತು. ಅವಳಿಗಾಗಿನ ನನ್ನ ದುಃಖವೇ ಈಗ ನನಗೂ ಅವಳಿಗೂ ಇದ್ದ ಸಂಬಂಧವಾಗಿ ಉಳಿದುಬಿಟ್ಟಿತು. ಒಂದು ಮೌನದ ಕಣ್ಣೀರು ಬಿಟ್ಟರೆ ನನಗೆ ಮತ್ತೇನೂ ತೋಚಲಿಲ್ಲ. ಮೈ ಕೊರೆಯುವ ಚಳಿಯನ್ನು ಮೀರಲು ಯತ್ನಿಸುತ್ತ ದೀರ್ಘವಾದ ಆ ರಾತ್ರಿ ಕಳೆಯತೊಡಗಿದೆ. ನನ್ನೊಳಗಿನ ಭಾವುಕತೆ ನಿಧಾನವಾಗಿ ಬತ್ತತೊಡಗಿತ್ತು. ಇರುಳು ಕಳೆದು ನಿದ್ದೆಯಿಂದ ಎದ್ದಾಗ ದುಃಸ್ವಪ್ನದ ತೀವ್ರತೆ ಕಳೆವಂತೆನನ್ನೊಳಗೇ ಕಾಡುತ್ತಿದ್ದ ತಂಗಿಯ ಸಾವಿನ ದುಃಖ ತನ್ನ ತೀವ್ರತೆ ಕಳೆದುಕೊಳ್ಳತೊಡಗಿತು. ಬೆಳಗಾಗುವಷ್ಟರಲ್ಲಿ ನಾನು ಖಾಲಿತನವನ್ನು ಅನುಭವಿಸಿದ್ದೆ. ನನ್ನ ಕಾಡುವ ಮನಸ್ಸಿನಿಂದ ಸೂಜಿ ಹೊರಬಂದುನನ್ನ ತಾಯಿ ಮತ್ತು ಪಂಚಿಟೋರ ಜೊತೆ ಸೇರಿಹೋಗಿದ್ದಳು. ಈಗ ಎಲ್ಲರೂ ನನ್ನ ಭೂತದಲ್ಲಿ ಲೀನರಾಗಿದ್ದರು. ಅಷ್ಟು ಬೇಗ ನನ್ನಿಂದ ದೂರವಾಗಿ ಹೋಗಿದ್ದರು. ಪರ್ವತ ಶ್ರೇಣಿಗಳು ನನ್ನನ್ನು ಬದಲಾಗುವಂತೆ ಬಲವಂತ ಮಾಡುತ್ತಿದ್ದವು. ಹೊಸ ಸತ್ಯಗಳಿಗೆ ನಾನು ತೆರೆದುಕೊಂಡುಹೋದಷ್ಟೂ ನನ್ನ ಮನಸ್ಸು ಹಗುರ ಮತ್ತು ನಿರ್ದಾಕ್ಷಿಣ್ಯವಾಗುತ್ತಿತ್ತು. ನನ್ನ ಮುಂದಿನ ಜೀವನಒಂದು ಪ್ರಾಣಿ ತನ್ನುಳಿವಿಗಾಗಿ ಹೋರಾಡುವಷ್ಟು ನೇರವಾಗಿ ಕಾಣುತ್ತಿತ್ತು. ಸೋಲು-ಗೆಲುವಿನ ಒಂದು ಸರಳ ಪಂದ್ಯಸಾವು ಅಥವಾ ಬದುಕು. ಕಷ್ಟ ಮತ್ತು ಅವಕಾಶ! ಮನಸ್ಸಿನ ಸಂಕೀರ್ಣ ಭಾವನೆಗಳನ್ನು ಮೀರಿದ ಮನುಷ್ಯನ ಸರಳ ಸ್ವಭಾವಗಳು ಮೇಲೇರಲಾರಂಭಿಸಿದ್ದವು. ನನ್ನ ಬದುಕಿನ ಎಲ್ಲ ಅಸ್ತಿತ್ವಗಳು ಎರಡೇ ಸೂತ್ರಗಳ ಸುತ್ತ ಸುತ್ತುತ್ತಿದ್ದವು. ನಾನು ಸಾಯುತ್ತಿದ್ದೇನೆ ಎಂಬ ಹೆದರಿಕೆ ಮತ್ತು ಹೇಗಾದರೂ ಮಾಡಿ ನನ್ನ ತಂದೆಯೊಡನೆ ಇರಬೇಕು ಎಂಬ ಹಂಬಲ.....